ತೆಲಂಗಾಣ: ನಿಷೇಧಿತ ಸಿಪಿಐ (ಮಾವೊವಾದಿ)ಯ 14 ಸದಸ್ಯರು ಪೊಲೀಸರ ಮುಂದೆ ಶರಣಾಗತ

PC : PTI
ಹೈದರಾಬಾದ್: ಕಾನೂನು ಬಾಹಿರ ಸಿಪಿಐ (ಮಾವೋವಾದಿ) ಯ 14 ಸದಸ್ಯರು ತೆಲಂಗಾಣದ ಭದ್ರಾದ್ರಿ ಕೋಥಗುಂಡೆಂ ಜಿಲ್ಲೆಯ ಪೊಲೀಸರ ಮುಂದೆ ಸೋಮವಾರ ಶರಣಾಗತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾಗತ ಮಾವೋವಾದಿಗಳಿಗೆ ಕಲ್ಯಾಣ ಕ್ರಮಗಳನ್ನು ಘೋಷಿಸಿರುವ ಕುರಿತು ತಿಳಿದ ಬಳಿಕ ಅವರು ಪೊಲೀಸ್ ಅಧೀಕ್ಷಕ ಬಿ. ರೋಹಿತ್ ರಾಜು ಅವರ ಮುಂದೆ ಶರಣಾಗತರಾಗಿದ್ದಾರೆ ಪೊಲೀಸ್ ಹೇಳಿಕೆ ತಿಳಿಸಿದೆ.
‘‘ಆಪರೇಷನ್ ಚೆಯುತಾ’’ ಮೂಲಕ ಬುಡಕಟ್ಟು ಜನರ ಕಲ್ಯಾಣಕ್ಕೆ ಪೊಲೀಸರು ಹಾಗೂ ಸಿಆರ್ಪಿಎಫ್ ನಡೆಸಿದ ಕಾರ್ಯಗಳ ಕುರಿತು ತಿಳಿದುಕೊಂಡ ಬಳಿಕ ಅವರು ಶರಣಾಗತರಾಗಲು ಹಾಗೂ ಕುಟುಂಬದ ಸದಸ್ಯರೊಂದಿಗೆ ಶಾಂತಿಯುತವಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ ಎಂದು ಅದು ತಿಳಿಸಿದೆ.
ಈ ವರ್ಷ ಜನವರಿಯಲ್ಲಿ ಜಿಲ್ಲೆಯ ಚಾರ್ಲದಲ್ಲಿ ಮಾವೋವಾದಿ ಭೂಗತ ಸದಸ್ಯರು ಹಾಗೂ ಶರಣಾಗತ ಮಾವೋವಾದಿಗಳ ಕುಟುಂಬದ ಸದಸ್ಯರು ಆಯೋಜಿಸಿದ್ದ ‘‘ಆತ್ಮೀಯ ಸಮ್ಮೇಳನಂ’’ ಸಭೆಯಲ್ಲಿ ಪೊಲೀಸರ ಮುಂದೆ ಶರಣಾಗತರಾಗುವವರಿಗೆ ನೀಡಲಾಗುವ ಸೌಲಭ್ಯಗಳ ಕುರಿತು ಪೊಲೀಸ್ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದ್ದರು. ಇದರ ಪರಿಣಾಮ ಕಳೆದ ಎರಡು ತಿಂಗಳಲ್ಲಿ ಒಟ್ಟು 44 ಮಾವೋವಾದಿಗಳು ಶರಣಾಗತರಾಗಿದ್ದರು ಎಂದು ಹೇಳಿಕೆ ತಿಳಿಸಿದೆ.
ಶರಣಾಗತರಾಗಲು ಬಯಸುವ ಹಾಗೂ ಸಾಮಾನ್ಯ ರೀತಿಯಲ್ಲಿ ಜೀವನ ಸಾಗಿಸಲು ಬಯಸುವ ಸಿಪಿಐ (ಮಾವೋವಾದಿ) ಸದಸ್ಯರು ತಮ್ಮ ಕುಟುಂಬದ ಸದಸ್ಯರ ಮೂಲಕ ಸಮೀಪದ ಪೊಲೀಸ್ ಠಾಣೆ ಅಥವಾ ಜಿಲ್ಲೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.







