ತೆಲಂಗಾಣ | ವಿಷಾಹಾರ ಸೇವನೆ ; 52 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ
ಹೈದರಾಬಾದ್, ನ. 1: ತೆಲಂಗಾಣದ ಜೋಗುಲಂಬ ಗಡವಾಲ ಜಿಲ್ಲೆಯಲ್ಲಿರುವ ಸರಕಾರಿ ಹಾಸ್ಟೆಲ್ ನ 52ಕ್ಕೂ ಅಧಿಕ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಭೋಜನ ಸೇವಿಸಿದ ಬಳಿಕ ಹೊಟ್ಟೆ ನೋವು, ವಾಂತಿ ಆರಂಭವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತಿಕ್ಯಾಲಾ ಮಂಡಲದ ಧರ್ಮಾವರಂನಲ್ಲಿರುವ ಹಾಸ್ಟೆಲ್ ನ ವಿದ್ಯಾರ್ಥಿಗಳು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ ಎಂದು ಶನಿವಾರ ಅಧಿಕೃತ ವರದಿಯಾಗಿದೆ.
32 ವಿದ್ಯಾರ್ಥಿಗಳು ಬಿಡುಗಡೆಯಾಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಸುರಕ್ಷಿತ ಹಾಗೂ ನಿಗಾದಲ್ಲಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.
‘‘ನಾವು ಕೂಡ ಹಾಸ್ಟೆಲ್ ನಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.
‘‘ಶುಕ್ರವಾರ ರಾತ್ರಿ ನಮಗೆ ಭೋಜನಕ್ಕೆ ಸಾಂಬಾರ್, ಅನ್ನ ಹಾಗೂ ಕ್ಯಾಬೇಜ್ ಕರಿ ನೀಡಲಾಗಿತ್ತು. ಅನಂತರ ನಮಗೆ ಹೊಟ್ಟೆ ನೋವು ಹಾಗೂ ವಾಂತಿ ಉಂಟಾಯಿತು’’ ಎಂದು ಸಂತ್ರಸ್ತ ವಿದ್ಯಾರ್ಥಿಯೋರ್ವ ತಿಳಿಸಿದ್ದಾನೆ.







