ತೆಲಂಗಾಣ | ಜುಬಿಲಿ ಹಿಲ್ಸ್ ಉಪಚುನಾವಣೆ: ಕಾಂಗ್ರೆಸ್ ಗೆ ಜಯ

ವಿ. ನವೀನ್ ಯಾದವ್ | Photo Credit : PTI
ಹೈದರಾಬಾದ್: ಜುಬಿಲಿ ಹಿಲ್ಸ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ. ನವೀನ್ ಯಾದವ್ ಗೆಲುವು ದಾಖಲಿಸಿದ್ದಾರೆ. ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಅವರು ಬಿಆರ್ಎಸ್ನ ಮಗಂತಿ ಸುನಿತಾ ಗೋಪಿನಾಥ್ ಅವರನ್ನು 24,658 ಮತಗಳ ಬಹುಮತದಿಂದ ಸೋಲಿಸಿದರು.
ಕೋಟ್ಲಾ ವಿಜಯ್ ಭಾಸ್ಕರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ 10 ಸುತ್ತಿನ ಮತ ಎಣಿಕೆಯಲ್ಲಿ 9 ಸುತ್ತುಗಳು ಕಾಂಗ್ರೆಸ್ ಪರವಾಗಿ ಬಂದವು. ನವೀನ್ ಯಾದವ್ ಒಟ್ಟು 99,120 ಮತಗಳನ್ನು ಪಡೆದರೆ, ಸುನಿತಾ ಗೋಪಿನಾಥ್ 74,462 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಲಂಕಾಲಾ ದೀಪಕ್ ರೆಡ್ಡಿ ಮೂರನೇ ಸ್ಥಾನ ಪಡೆದು, ಠೇವಣಿ ಕಳೆದುಕೊಂಡರು.
ಬಿಆರ್ಎಸ್ ಶಾಸಕ ಮಗಂತಿ ಗೋಪಿನಾಥ್ ಅವರ ನಿಧನದಿಂದ ಖಾಲಿಯಾಗಿದ್ದ ಈ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ, ಹೈದರಾಬಾದ್ ನಗರದ ರಾಜಕೀಯ ವಾತಾವರಣದ ಮೇಲೆ ನೇರ ಪರಿಣಾಮ ಬೀರುವಂತಿತ್ತು. ಬಿಆರ್ಎಸ್ನ ಬಲವಾದ ಸ್ಥಾನವೆಂದು ಪರಿಗಣಿಸಲ್ಪಟ್ಟ ಜುಬಿಲಿ ಹಿಲ್ಸ್ ಅನ್ನು ಗೆದ್ದ ಕಾಂಗ್ರೆಸ್ ನಗರ ಪ್ರದೇಶದ ರಾಜಕೀಯದಲ್ಲಿ ತನ್ನ ಹಿಡಿತವನ್ನು ಬಲಪಡಿಸಿದೆ.
ಬಿಆರ್ಎಸ್ಗೆ ಇದು ಹಿನ್ನಡೆ ಆಗಿದೆ. 2023ರ ಸೋಲಿನ ನಂತರ ಪಕ್ಷವು ಪುಟಿದೇಳಲು ಕೈಗೊಂಡ ಕ್ರಮಗಳು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಸಹಾನುಭೂತಿ ಮತ್ತು ಸಂಘಟನೆಯ ಸಂಪೂರ್ಣ ಶಕ್ತಿಯನ್ನು ಬಳಸಿಕೊಂಡರೂ, ಸೋಲಿನ ಅಂತರವನ್ನು ಕಡಿಮೆ ಮಾಡಲು ಪಕ್ಷ ವಿಫಲವಾಯಿತು.
ಕ್ಷೇತ್ರದ 36 ಶೇಕಡಾ ಮುಸ್ಲಿಂ ಮತದಾರರು ಈ ಬಾರಿ ಚುನಾವಣೆಯಲ್ಲಿ ನಿರ್ಣಾಯಕ ಪರಿಣಾಮ ಬೀರಿದ್ದಾರೆ. ಎಐಎಂಐಎಂ ಸ್ಪರ್ಧಿಸದಿದ್ದ ಹಿನ್ನೆಲೆಯಲ್ಲಿ ಸಮುದಾಯದ ಮತಗಳು ಕಾಂಗ್ರೆಸ್ ಗೆ ವರವಾಗಿ ಪರಿಣಮಿಸಿತು. ಮತ ಎಣಿಕೆಯು ಅಂತಿಮ ಸುತ್ತು ತಲುಪುತ್ತಿದ್ದಂತೆ ಗೆಲುವಿನ ಅಂತರ 24 ಸಾವಿರವನ್ನು ದಾಟಿತು. ಅದೇ ವೇಳೆ ಗಾಂಧಿ ಭವನದಲ್ಲಿ ಸಂಭ್ರಮಾಚರಣೆಗಳು ಪ್ರಾರಂಭವಾದವು.







