Telangana | BRSಗೆ ಶಾಸಕಿ ಕವಿತಾ ವಿದಾಯ; ಹೊಸಪಕ್ಷ ಸ್ಥಾಪನೆಯ ಘೋಷಣೆ

ಕೆ.ಕವಿತಾ | Photo Credit : PTI
ಹೈದರಾಬಾದ್,ಜ.5: BRS ವರಿಷ್ಠ ಹಾಗೂ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಎಂಎಲ್ಸಿ ಕೆ.ಕವಿತಾ ಅವರು ವಿಧಾನಸಭಾ ಚುನಾವಣೆಗಳಿಗೆ ಮುನ್ನ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಸೋಮವಾರ ಇಲ್ಲಿ ಘೋಷಿಸಿದರು. ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷಗಳು ಬಾಕಿಯಿವೆ.
ವಿಧಾನ ಪರಿಷತ್ನಲ್ಲಿ ಆಗಾಗ್ಗೆ ಕಣ್ಣೀರಿಡುತ್ತ ಭಾವುಕರಾಗಿ ಮಾತನಾಡಿದ ಕವಿತಾ,ಸ್ವಾಭಿಮಾನಕ್ಕಾಗಿ ತಾನು ತನ್ನ ತಂದೆಯ ಪಕ್ಷವನ್ನು ತೊರೆಯುತ್ತಿದ್ದೇನೆಯೇ ಹೊರತು ಕಾಂಗ್ರೆಸ್ ಆರೋಪಿಸಿರುವ ಆಸ್ತಿ ವಿವಾದಗಳಿಂದಲ್ಲ ಎಂದು ತನ್ನ ಟೀಕಾಕಾರರಿಗೆ ತಿಳಿಸಿದರು.
ರಾಜಕೀಯವನ್ನು ಪ್ರವೇಶಿಸಲು ತಾನೆಂದಿಗೂ ಉದ್ದೇಶಿಸಿರಲಿಲ್ಲ,ಆದರೆ BRS ನೀಡಿದ್ದ ನಿಜಾಮಾಬಾದ್ ಸಂಸದೀಯ ಕ್ಷೇತ್ರದ ಟಿಕೆಟನ್ನು ಸಂಪೂರ್ಣ ವಿವೇಚನೆಯ ಬಳಿಕವೇ ಸ್ವೀಕರಿಸಿದ್ದೆ. ತೆಲಂಗಾಣ ರಚನೆಯ ಬಳಿಕ ತಾನು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿದ್ದೆ. ತನ್ನ ಕೊಡುಗೆಗಳ ಹೊರತಾಗಿಯೂ ಪಕ್ಷದೊಳಗೆ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿತ್ತು,ಆದರೂ ತಾನು ಧೈರ್ಯ ಮತ್ತು ದೃಢನಿಶ್ಚಯದೊಂದಿಗೆ ಬೆಂಬಲಿಗ ಕಾರ್ಯಕರ್ತರು, ಮಹಿಳೆಯರು ಮತ್ತು ಶೋಷಿತರಿಗೆ ಬದ್ಧಳಾಗಿ ಉಳಿದಿದ್ದೆ ಎಂದು ಹೇಳಿದರು.







