Telangana | ಜಲಾಶಯದಲ್ಲಿ ಮೂವರು ಹೆಣ್ಣು ಮಕ್ಕಳ ಮೃತದೇಹ ಪತ್ತೆ

Photo Credit : @IndiaToday
ಹೈದರಾಬಾದ್, ಮಾ. 8: ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ಜಲಾಶಯವೊಂದರಲ್ಲಿ ಶನಿವಾರ ಮೂವರು ಹೆಣ್ಣು ಮಕ್ಕಳ ಮೃತದೇಹ ಪತ್ತೆಯಾಗಿದೆ. ಈ ಮೂವರು ಹೆಣ್ಣು ಮಕ್ಕಳನ್ನು ಅವರ ತಂದೆಯೇ ಜಲಾಶಯಕ್ಕೆ ತಳ್ಳಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಮೃತ ಹೆಣ್ಣು ಮಕ್ಕಳು 5, 7 ಹಾಗೂ 8 ವಯಸ್ಸು ಪ್ರಾಯದವರು. ಪ್ರಾಥಮಿಕ ತನಿಖೆಯ ಪ್ರಕಾರ ಮಕ್ಕಳು ತಮ್ಮ ತಂದೆಯೊಂದಿಗೆ ಸಮೀಪದ ದಿನಸಿ ಅಂಗಡಿಯಿಂದ ತಿಂಡಿ ಖರೀದಿಸಲು ತೆರಳಿದ್ದರು. ಆದರೆ, ಹಲವು ಗಂಟೆಗಳ ಬಳಿಕವೂ ಹಿಂದಿರುಗಿಲ್ಲ. ಅನಂತರ ಕುಟುಂಬದ ಸದಸ್ಯರು ಅವರನ್ನು ಹುಡುಕಾಡಿದರು.
ಮಕ್ಕಳು ಪತ್ತೆಯಾಗದ ಬಳಿಕ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೂರು ವಿಶೇಷ ತಂಡಗಳನ್ನು ರೂಪಿಸಿದ್ದಾರೆ.
ತನಿಖೆ ಸಂದರ್ಭ ಮಕ್ಕಳ ತಂದೆ ಮೇಲೆ ಸಂದೇಹ ಮೂಡಿತು. ತಂದೆ ತನ್ನ ಮೂವರು ಮಕ್ಕಳನ್ನು ಜಲಾಶಯಕ್ಕೆ ತಳ್ಳಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾವಿನ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





