ಹಿಂದುತ್ವ ಪ್ರಚಾರದ ’ರಜಾಕಾರ್’ ಚಿತ್ರಕ್ಕೆ ತೆಲಂಗಾಣ ಸರಕಾರದ ಗದ್ದರ್ ಚಲನಚಿತ್ರ ಪ್ರಶಸ್ತಿ!
ಸಾಮಾಜಿಕ ಕಾರ್ಯಕರ್ತರು, ಪ್ರತಿಪಕ್ಷ ನಾಯಕರ ಖಂಡನೆ

PC : thenewsminute.com
ಹೈದರಾಬಾದ್: ಕೋಮು ಧ್ರುವೀಕರಣದ ನಿರೂಪಣೆಗಾಗಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದ ‘ರಜಾಕಾರ್: ದಿ ಸೈಲಂಟ್ ಜಿನೊಸೈಡ್ ಆಫ್ ಹೈದರಾಬಾದ್’ ಚಿತ್ರಕ್ಕೆ ತೆಲಂಗಾಣದ ಕಾಂಗ್ರೆಸ್ ಸರಕಾರವು ಶನಿವಾರ ಇತಿಹಾಸದ ಕುರಿತು ಅತ್ಯುತ್ತಮ ಚಲನಚಿತ್ರಕ್ಕಾಗಿರುವ ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನಿಸಿದೆ. 2024ರ ಈ ಚಿತ್ರವನ್ನು ತೆಲಂಗಾಣ ಬಿಜೆಪಿ ನಾಯಕ ಗೂಡೂರ್ ನಾರಾಯಣ ರೆಡ್ಡಿ ನಿರ್ಮಿಸಿದ್ದು, ಯಾಟಾ ಸತ್ಯನಾರಾಯಣ ನಿರ್ದೇಶಿಸಿದ್ದಾರೆ.
ಕ್ರಾಂತಿಕಾರಿ ತೆಲಂಗಾಣ ಕವಿ ಗದ್ದರ್ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರವು 2025ರಲ್ಲಿ ಸ್ಥಾಪಿಸಿದ್ದು, ತೆಲುಗು ನಟಿ ಹಾಗೂ ಬಿಜೆಪಿ ನಾಯಕಿ ಜಯಸುಧಾ ಅವರು ರೇವಂತ ರೆಡ್ಡಿ ಸರಕಾರವು ರಚಿಸಿದ್ದ ಆಯ್ಕೆ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ. ನಟ ಹಾಗೂ ಬಿಜೆಪಿಯ ಮಿತ್ರಪಕ್ಷ ಟಿಡಿಪಿಯ ಮಾಜಿ ಸಂಸದ ಮುರಳಿ ಮೋಹನ್ ಅವರೂ ಸಮಿತಿಯ ಸದಸ್ಯರಾಗಿದ್ದಾರೆ.
ರಜಾಕಾರ್ ಪರಿಸರ/ಪರಂಪರೆ/ಇತಿಹಾಸ ಕುರಿತು ಅತ್ಯುತ್ತಮ ಚಲನಚಿತ್ರ, ಭೀಮ್ಸ್ ಸೆಸಿರೊಲಿಯೊ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಮತ್ತು ನಲ್ಲ ಶ್ರೀನು ಅವರಿಗೆ ಅತ್ಯುತ್ತಮ ಮೇಕಪ್ ಕಲಾವಿದ; ಹೀಗೆ ಮೂರು ತೆಲಂಗಾಣ ಗದ್ದರ್ ಪ್ರಶಸ್ತಿಗಳನ್ನು ಗೆದ್ದಿದೆ.
ಹಿಂದುತ್ವದ ಅಜೆಂಡಾವನ್ನು ಮುಂದುವರಿಸಲು ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ನಿರ್ಮಿಸಲಾದ ಪ್ರಚಾರ ಚಿತ್ರ ಎಂದು ವ್ಯಾಪಕ ಟೀಕೆಗೊಳಗಾಗಿದ್ದ ‘ರಜಾಕಾರ್’ಗೆ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರವು ಪ್ರಶಸ್ತಿ ನೀಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರತಿಪಕ್ಷಗಳ ನಾಯಕರು ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರವು ಭಾರತ ಒಕ್ಕೂಟದಲ್ಲಿ ಹಿಂದಿನ ಹೈದರಾಬಾದ್ ರಾಜ್ಯದ ವಿಲೀನದ ಹಿನ್ನೆಲೆಯನ್ನು ಹೊಂದಿದೆ. ರಜಾಕಾರರು ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳುವುದು ಇಷ್ಟವಿರದಿದ್ದ ನಿಝಾಮರ ಕ್ರಿಯಾಶೀಲ ಅರೆಸೇನಾ ಪಡೆಯಾಗಿದ್ದರು.
ತೆಲಂಗಾಣ ರೈತರ ಹೋರಾಟವನ್ನು ಹತ್ತಿಕ್ಕಲು ರಜಾಕಾರರನ್ನು ನಿಯೋಜಿಸಲಾಗಿತ್ತು ಮತ್ತು ಅವರು ಮುಸ್ಲಿಮರು ಸೇರಿದಂತೆ ದಬ್ಬಾಳಿಕೆಯ ನಿಝಾಮ್ ಆಡಳಿತದ ವಿರುದ್ಧ ಹೋರಾಡುತ್ತಿದ್ದವರ ವಿರುದ್ಧ ಹಲವಾರು ದೌರ್ಜನ್ಯಗಳನ್ನು ಎಸಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ತೆಲಂಗಾಣ ಬಿಜೆಪಿಯು ರಾಜಕೀಯ ಲಾಭಕ್ಕಾಗಿ ರಜಾಕಾರರ ಸಂಕೀರ್ಣ ಇತಿಹಾಸವನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದೆ. ಬೆಜೆಪಿಯು ತೆಲಂಗಾಣ ರೈತ ಬಂಡಾಯದ ಸೂಕ್ಷ್ಮ ವ್ಯತ್ಯಾಸಗಳನ್ನು ಮತ್ತು ನಿಝಾಮರ ರಜಾಕಾರರು ಪ್ರಬಲ ಜಾತಿಗಳ ಭೂಮಾಲಿಕರೊಂದಿಗೆ ಸೇರಿಕೊಂಡು ಕೆಳಜಾತಿಗಳವರೇ ಹೆಚ್ಚಿದ್ದ ಕಾರ್ಮಿಕರ ಮಲೆ ನಡೆಸಿದ್ದ ದೌರ್ಜನ್ಯಗಳನ್ನು ಬದಿಗಿಟ್ಟು ಅದನ್ನು ಧಾರ್ಮಿಕ ಕಿರುಕುಳದ ನಿದರ್ಶನವನ್ನಾಗಿ ಚಿತ್ರಿಸುವ ಮೂಲಕ ಹಿಂದು-ಮಸ್ಲಿಮ್ ಬಿರುಕನ್ನು ಸೃಷ್ಟಿಸಲು ಯತ್ನಿಸುತ್ತಿದೆ.
ಆರಂಭದಲ್ಲಿ 2023ರ ತಲಂಗಾಂಣ ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆಯು ನಿಗದಿಯಾಗಿದ್ದ ರಜಾಕಾರ್ ಚಿತ್ರವು ಇಡೀ ಮುಸ್ಲಿಮ ಸಮುದಾಯವನ್ನು ಖಳನಾಯಕನಾಗಿಸಿದ್ದಕ್ಕಾಗಿ ವ್ಯಾಪಕ ಟೀಕೆಗೊಳಗಾಗಿತ್ತು.
ಇಂತಹ ಚಿತ್ರಕ್ಕೆ ಪ್ರಶಸ್ತಿ ನೀಡುವ ನಿರ್ಧಾರಕ್ಕಾಗಿ ಮತ್ತು ತನ್ಮೂಲಕ ಚಿತ್ರದಲ್ಲಿನ ಮುಸ್ಲಿಮ ವಿರೋಧಿ ದೃಷ್ಟಿಕೋನಗಳನ್ನು ಮೌನವಾಗಿ ಅನುಮೋದಿಸಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರತಿಪಕ್ಷ ನಾಯಕರು ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸಿದ್ದಾರೆ.
ಪ್ರಶಸ್ತಿ ಪ್ರದಾನಕ್ಕೆ ಒಂದು ದಿನ ಮೊದಲು,ಜೂ.13ರಂದು ತೀರ್ಪುಗಾರರ ಆಯ್ಕೆ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ತೆಲಂಗಾಣ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದ್ದು, ನ್ಯಾ.ಸ್ಯಾಮ್ ಕೋಶಿ ಮತ್ತು ನರಸಿಂಗ ರಾವ್ ನಂದಿಕೊಂಡಾ ಅವರ ಪೀಠವು ಪ್ರತಿವಾದಿಗಳಿಗೆ ನೋಟಿಸ್ಗಳನ್ನು ಹೊರಡಿಸಿತ್ತು.
ಸೌಜನ್ಯ: thenewsminute.com







