ತೆಲಂಗಾಣ | ಔಷಧ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟ ಪ್ರಕರಣ: ಈಗಲೂ 9 ಮಂದಿ ನಾಪತ್ತೆ
ಸ್ಥಳಕ್ಕೆ ಭೇಟಿ ನೀಡಲಿರುವ ತಜ್ಞರ ಸಮಿತಿ

Photo credit: PTI
ಸಂಗಾರೆಡ್ಡಿ: ಪಾಶಮಿಲರಂನಲ್ಲಿನ ಸಿಗಚಿ ಇಂಡಸ್ಟ್ರೀಸ್ ನ ಔಷಧ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 38 ಮಂದಿ ಮೃತಪಟ್ಟು, 35 ಮಂದಿ ಗಾಯಗೊಂಡ ಘಟನೆಯಲ್ಲಿ ಈಗಲೂ ಸುಮಾರು ಒಂಬತ್ತು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪ್ರಯತ್ನಗಳನ್ನು ಮುಂದುವರಿಸಲಾಗಿದೆ ಎಂದು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾರಿತೋಷ್ ಪಂಕಜ್ ತಿಳಿಸಿದ್ದಾರೆ.
ಸ್ಫೋಟದ ಕಾರಣಗಳ ಕುರಿತು ಮೌಲ್ಯಮಾಪನ ನಡೆಸಿ, ಸ್ಫೋಟದ ಸರಣಿ ಪ್ರಕ್ರಿಯೆಗೆ ಕಾರಣವಾದ ಸಂಗತಿಗಳನ್ನು ಕಂಡು ಹಿಡಿಯಲು ರಾಜ್ಯ ಸರಕಾರ ನೇಮಿಸಿರುವ ತಜ್ಞರ ತಂಡ ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ತಜ್ಞರು ಸಮಿತಿಯು ಇನ್ನು ಒಂದು ತಿಂಗಳೊಳಗಾಗಿ ನಿರ್ದಿಷ್ಟ ಸಲಹೆಗಳು ಹಾಗೂ ಶಿಫಾರಸುಗಳೊಂದಿಗೆ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಿದೆ.
ಸಿಎಸ್ಐಆರ್ ನಲ್ಲಿರುವ ಭಾರತೀಯ ರಸಾಯನಿಕ ತಂತ್ರಜ್ಞಾನ ಸಂಸ್ಥೆಯ ಗೌರವ ವಿಜ್ಞಾನಿ ಡಾ. ಬಿ.ವೆಂಕಟೇಶ್ವರ್ ರಾವ್ ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಇಂದು ಸಂಬಂಧಿತ ಆಸ್ಪತ್ರೆಗಳಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾರಿತೋಷ್ ಪಂಕಜ್, “ಘಟನೆಯಲ್ಲಿ 38 ಮಂದಿ ಮೃತಪಟ್ಟಿದ್ದಾರೆ. ಒಂಬತ್ತು ಮಂದಿ ನಾಪತ್ತೆಯಾಗಿದ್ದು, ಇಂದು ಅಥವಾ ನಾಳೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಮೂಳೆಗಳು ಹಾಗೂ ಇನ್ನಿತರ ವಿಷಯಗಳ ಕುರಿತು ನಾವು ವರದಿಗಳನ್ನು ಸ್ವೀಕರಿಸಲಿದ್ದೇವೆ. ಇದಾದ ನಂತರ, ಎಲ್ಲವೂ ಸ್ಪಷ್ಟವಾಗಲಿದೆ” ಎಂದು ತಿಳಿಸಿದ್ದಾರೆ.







