ಬಿಆರ್ಎಸ್ ಶಾಸಕರ ಅನರ್ಹತೆ: ಮೂರು ತಿಂಗಳಲ್ಲಿ ನಿರ್ಧಾರಕ್ಕೆ ತೆಲಂಗಾಣ ಸ್ಪೀಕರ್ ಗೆ ಸುಪ್ರೀಂ ಗಡುವು

ಸುಪ್ರೀಂ | PTI
ಹೊಸದಿಲ್ಲಿ,ಜು.31: ಬಿ ಆರ್ ಎಸ್ ನಿಂದ ಟಿಕೆಟ್ ಪಡೆದು ಆಯ್ಕೆಯಾಗಿ ಬಳಿಕ ರಾಜ್ಯದಲ್ಲಿಯ ಆಡಳಿತಾರೂಢ ಕಾಂಗ್ರೆಸ್ ಗೆ ಪಕ್ಷಾಂತರಗೊಂಡ 10 ಶಾಸಕರ ಅನರ್ಹತೆ ಕುರಿತು ಮೂರು ತಿಂಗಳೊಳಗೆ ನಿರ್ಧರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ತೆಲಂಗಾಣ ವಿಧಾನಸಭಾ ಸ್ಪೀಕರ್ ಗೆ ಸೂಚಿಸಿದೆ.
ಬಿಆರ್ಎಸ್ ನಾಯಕರಾದ ಕೆ.ಟಿ.ರಾಮರಾವ್, ಪಾಡಿ ಕೌಶಿಕ ರೆಡ್ಡಿ ಮತ್ತು ಕೆ.ಒ.ವಿವೇಕಾನಂದ ಅವರು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾ.ಎ.ಜೆ.ಮಸಿಹ್ ಅವರ ಪೀಠವು ಈ ಆದೇಶವನ್ನು ಹೊರಡಿಸಿತು. ರಾಜಕೀಯ ಪಕ್ಷಾಂತರಗಳು ರಾಷ್ಟ್ರೀಯ ಚರ್ಚೆಯ ವಿಷಯವಾಗಿದ್ದು, ಅದನ್ನು ತಡೆಯದಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಅಡ್ಡಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.
‘ಪ್ರಸ್ತುತ ಮೇಲ್ಮನವಿಯನ್ನು ಅಂಗೀಕರಿಸಲು ನಾವು ಒಲವು ಹೊಂದಿದ್ದೇವೆ. ತೆಲಂಗಾಣ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ನ.22,2024ರ ಆದೇಶವನ್ನು ರದ್ದುಗೊಳಿಸಲಾಗಿದೆ. 10 ಶಾಸಕರ ವಿರುದ್ಧದ ಅನರ್ಹತೆ ಪ್ರಕ್ರಿಯೆಯನ್ನು ಸಾಧ್ಯವಿದ್ದಷ್ಟು ಶೀಘ್ರ ಮತ್ತು ಮೂರು ತಿಂಗಳುಗಳಲ್ಲಿ ನಿರ್ಧರಿಸಬೇಕು. ಈ ಪ್ರಕ್ರಿಯೆಯನ್ನು ಮಂದೂಡುವಂತೆ ಮಾಡಲು ಯಾವುದೇ ಶಾಸಕರಿಗೆ ಅವಕಾಶ ನೀಡಕೂಡದು. ಹಾಗೆ ಮಾಡಿದರೆ ಸ್ಪೀಕರ್ ಪ್ರತಿಕೂಲ ತೀರ್ಮಾನವನ್ನು ಕೈಗೊಳ್ಳಬೇಕು’ ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತು.
ವಿಚಾರಣೆಗೆ ವೇಳಾಪಟ್ಟಿಯನ್ನು ನಿಗದಿಗೊಳಿಸುವಂತೆ ಸ್ಪೀಕರ್ ಗೆ ನಿರ್ದೇಶನ ನೀಡಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠದ ಆದೇಶವನ್ನು ರದ್ದುಗೊಳಿಸಿದ್ದ ವಿಭಾಗೀಯ ಪೀಠದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿತು.
ಪ್ರಜಾಪ್ರಭುತ್ವಕ್ಕೆ ಅಪಾಯವನ್ನೊಡ್ಡುವ ಪಕ್ಷಾಂತರಿಗಳ ವಿರುದ್ಧ ಕ್ರಮವನ್ನು ತಡೆಯಲು ವಿಧಾನಸಭೆಗಳ ಸ್ಪೀಕರ್ ಗಳು ಇಂತಹ ಪ್ರಕ್ರಿಯೆಗಳಲ್ಲಿ ಅಸಾಧಾರಣ ವಿಳಂಬವನ್ನುಂಟು ಮಾಡುವುದರಿಂದ ಶಾಸಕರ ಅನರ್ಹತೆಗೆ ಪ್ರಸ್ತುತ ಕಾರ್ಯವಿಧಾನವನ್ನು ಸಂಸತ್ತು ಪುನರ್ ಪರಿಶೀಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಪೀಠವು ತನ್ನ ಆದೇಶದಲ್ಲಿ ತಿಳಿಸಿತು.
ಕಾಂಗ್ರೆಸ್ ಗೆ ಪಕ್ಷಾಂತರಗೊಂಡ 10 ಶಾಸಕರ ವಿರುದ್ಧ ಬಾಕಿಯಿರುವ ಅನರ್ಹತೆ ಪ್ರಕ್ರಿಯೆಗಳ ಕುರಿತು ತೆಲಂಗಾಣ ಸ್ಪೀಕರ್ ರಿಂದ ಸಕಾಲಿಕ ಕ್ರಮವನ್ನು ಬಿಆರ್ಎಸ್ ನಾಯಕರು ಕೋರಿದ್ದಾರೆ.
ಈ ನ್ಯಾಯಾಲಯವು ನೋಟಿಸ್ ನೀಡಿದ ಮತ್ತು ವಿಳಂಬವನ್ನು ಪರಿಶೀಲಿಸಲು ನಿರ್ಧರಿಸಿದ ಬಳಿಕವೇ ಸ್ಪೀಕರ್ ಅನರ್ಹತೆ ಅರ್ಜಿಗಳ ಕುರಿತು ಏಳು ತಿಂಗಳುಗಳಷ್ಟು ತಡವಾಗಿ ನೋಟಿಸ್ ಗಳನ್ನು ಹೊರಡಿಸಿದ್ದು ದುರದೃಷ್ಟಕರ ಎಂದು ಹೇಳಿದ ಪೀಠವು, ಸ್ಪೀಕರ್ ಅನರ್ಹತೆ ಪ್ರಕ್ರಿಯೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುವಾಗ ಯಾವುದೇ ಸಾಂವಿಧಾನಿಕ ವಿನಾಯತಿಯನ್ನು ಹೊಂದಿರುವುದಿಲ್ಲ, ಅವರು ನ್ಯಾಯಾಂಗ ಪರಿಶೀಲನೆಗೆ ಒಳಪಡುವ ನ್ಯಾಯಮಂಡಳಿಯ ರೀತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿತು.







