BRS ಶಾಸಕರ ಅನರ್ಹತೆ ಅರ್ಜಿ: ವಿಚಾರಣೆ ಪ್ರಾರಂಭಿಸಿದ ತೆಲಂಗಾಣ ಸ್ಪೀಕರ್

ಗಡ್ಡಂ ಪ್ರಸಾದ್ ಕುಮಾರ್ |Credit: X/@GpkOfficial_
ಹೈದರಾಬಾದ್: 2023ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರಗೊಂಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ವಿರೋಧ ಪಕ್ಷ BRS ಸಲ್ಲಿಸಿರುವ ಅರ್ಜಿಯ ಸಂಬಂಧ ತೆಲಂಗಾಣ ವಿಧಾನಸಭಾ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಸೋಮವಾರ ಸಂವಿಧಾನದ ಹತ್ತನೆ ಪರಿಚ್ಛೇದದಡಿ ವಿಚಾರಣೆಗೆ ಚಾಲನೆ ನೀಡಿದರು.
ಅಂತಹ ಹತ್ತು ಶಾಸಕರ ವಿರುದ್ಧ BRS ಅರ್ಜಿ ಸಲ್ಲಿಸಿದೆ. ಈ ಪೈಕಿ ನಾಲ್ವರು ಶಾಸಕರಾದ ಟಿ.ಪ್ರಕಾಶ್ ಗೌಡ್, ಕಾಳೆ ಯಾದಯ್ಯ, ಗುಡೆಂ ಮಹಿಪಾಲ್ ರೆಡ್ಡಿ ಹಾಗೂ ಬಂದ್ಲಾ ಕೃಷ್ಣಮೋಹನ್ ರೆಡ್ಡಿಯ ವಿಚಾರಣೆಯನ್ನು ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಸೋಮವಾರ ಮತ್ತು ಬುಧವಾರ ನಿಗದಿಗೊಳಿಸಿದ್ದಾರೆ.
ಅರ್ಜಿದಾರರು ಹಾಗೂ ಪಕ್ಷಾಂತರಗೊಂಡ ಶಾಸಕರನ್ನು ಪ್ರತಿನಿಧಿಸುತ್ತಿರುವ ವಕೀಲರ ಪಾಟಿ ಸವಾಲಿನೊಂದಿಗೆ ಮುಚ್ಚಿದ ಕೋಣೆಯಲ್ಲಿ ವಿಡಿಯೊ ವಿಚಾರಣೆಯನ್ನು ನಡೆಸಲಾಯಿತು. ವಿಚಾರಣೆಯ ಮೊದಲ ಅವಧಿಯಲ್ಲಿ BRS ಶಾಸಕ ಕಲ್ವಕುಂಟ್ಲಾ ಸಂಜಯ್ ಅವರನ್ನು ಪಾಟಿ ಸವಾಲಿಗೊಳಪಡಿಸಲಾಯಿತು. ಇದಾದ ಬಳಿಕ ಕಾಳೆ ಯಾದಯ್ಯ ಮತ್ತು ಗುಡೆಮ್ ಮಹಿಪಾಲ್ ರೆಡ್ಡಿ ಪರ ವಕೀಲರು ಚಿಂತಾ ಪ್ರಭಾಕರ್ ಅವರನ್ನು ಪಾಟಿ ಸವಾಲಿಗೊಳಪಡಿಸಿದರು.
ಈ ವಿಚಾರಣಾ ಅವಧಿಯ ಅಂತಿಮ ಸುತ್ತಿನಲ್ಲಿ ಪಲ್ಲ ರಾಜೇಶ್ವರ ರೆಡ್ಡಿಯನ್ನು ಬಂದ್ಲಾ ಕೃಷ್ಣಮೋಹನ್ ರೆಡ್ಡಿ ಪರ ವಕೀಲರು ಪಾಟಿ ಸವಾಲಿಗೊಳಪಡಿಸಿದರು. ಸ್ವತಃ ಸ್ಪೀಕರ್ ಅವರೇ ಅನರ್ಹತೆ ಅರ್ಜಿಗಳ ಕುರಿತು ನೇರವಾಗಿ ವಿಚಾರಣೆ ನಡೆಸುತ್ತಿರುವುದು ತೆಲಂಗಾಣ ವಿಧಾನಸಭಾ ಇತಿಹಾಸದಲ್ಲಿ ಇದೇ ಮೊದಲನೆಯದಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಸೇರ್ಪಡೆಯಾದ ಹತ್ತು ಮಂದಿ ಪಕ್ಷದ ಶಾಸಕರನ್ನು ಅನರ್ಹಗೊಳಿಸುವಂತೆ BRS ನಾಯಕರು ಸ್ಪೀಕರ್ ಎದುರು ಅರ್ಜಿ ಸಲ್ಲಿಸಿದ್ದಾರೆ.







