ಅಮೆರಿಕ : ತೆಲಂಗಾಣದ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

ಮುಹಮ್ಮದ್ ನಿಝಾಮುದ್ದೀನ್ (Photo: X/@amjedmbt)
ಹೈದರಾಬಾದ್: ತನ್ನ ಕೊಠಡಿಯ ಸಹಚರನೊಂದಿಗೆ ಘರ್ಷಣೆ ನಡೆದ ನಂತರ, ತೆಲಂಗಾಣದ ಯುವಕನನ್ನು ಅಮೆರಿಕ ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಗುರುವಾರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ಮುಹಮ್ಮದ್ ನಿಝಾಮುದ್ದೀನ್ (30) ಮೃತ ಯುವಕ.
ಈ ಕುರಿತು ಪ್ರತಿಕ್ರಿಯಿಸಿದ ಮೃತ ಮುಹಮ್ಮದ್ ನಿಝಾಮುದ್ದೀನ್ ತಂದೆ ಮುಹಮ್ಮದ್ ಹಸ್ನುದ್ದೀನ್, ಈ ಮಾಹಿತಿಯನ್ನು ನಾನು ನನ್ನ ಪುತ್ರನ ಸ್ನೇಹಿತನಿಂದ ಸ್ವೀಕರಿಸಿದ್ದು, ಈ ಘಟನೆ ಸೆಪ್ಟೆಂಬರ್ 3ರಂದು ನಡೆದಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ಅಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಈ ಘರ್ಷಣೆ ನಡೆಯಿತೆಂದು ನನ್ನ ಪುತ್ರನ ಸ್ನೇಹಿತ ತಿಳಿಸಿದ್ದಾನೆ. ಆದರೆ, ಘಟನೆಯ ವಿವರ ಇನ್ನೂ ಅಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಸೆಪ್ಟೆಂಬರ್ 3ರಂದು ಸಾಂತ ಕ್ಲಾರಾದಲ್ಲಿನ ನಿವಾಸದಲ್ಲಿ ಮೃತ ಮುಹಮ್ಮದ್ ನಿಝಾಮುದ್ದೀನ್ ಚಾಕು ಹಿಡಿದು ನಿಂತಿದ್ದದ್ದು ಕಂಡು ಬಂದ ನಂತರ, ಆತನನ್ನು ಗುಂಡಿಟ್ಟು ಹತ್ಯೆಗೈಯ್ಯಲಾಯಿತು ಎಂದು ತಿಳಿಸಿದ್ದಾರೆ. 911 ದೂರವಾಣಿ ಕರೆಯ ಮೂಲಕ, ಮನೆಯೊಂದರಲ್ಲಿ ಇರಿತದ ಪ್ರಕರಣ ನಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು ಎನ್ನಲಾಗಿದೆ.
ತಮ್ಮ ಪುತ್ರನ ಮೃತದೇಹವನ್ನು ಮೆಹಬೂಬನಗರಕ್ಕೆ ತರಲು ನೆರವು ನೀಡಬೇಕು ಎಂದು ಮುಹಮ್ಮದ್ ನಿಝಾಮುದ್ದೀನ್ ರ ತಂದೆ ಮುಹಮ್ಮದ್ ಹಸ್ನುದ್ದೀನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.







