ತೆಲಂಗಾಣ ಸುರಂಗ ಕುಸಿತ: ಎರಡು ವಾರ ಕಳೆದರೂ ಪತ್ತೆಯಾಗದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಸುಳಿವು
ರಕ್ಷಣಾ ಕಾರ್ಯಾಚರಣೆಯೊಂದಿಗೆ ಸೇರಿಕೊಂಡ ತರಬೇತಿ ಪಡೆದ ಶ್ವಾನಗಳು ಹಾಗೂ ರೊಬೊಟಿಕ್ ತಜ್ಞರು

PC : PTI
ಹೈದರಾಬಾದ್: ನಾಗರಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದ ಪಾರ್ಶ್ವವೊಂದು ಕುಸಿದು ಶನಿವಾರಕ್ಕೆ ಎರಡು ವಾರಗಳಾಗಿದ್ದರೂ, ಸುರಂಗದೊಳಗೆ ಸಿಲುಕಿರುವ ಎಂಟು ಕಾರ್ಮಿಕರ ಯಾವುದೇ ಸುಳಿವು ಇದುವರೆಗೂ ಪತ್ತೆಯಾಗಿಲ್ಲ.
ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಗತಿ ಕಂಡು ಬಾರದೆ ಇರುವುದರಿಂದ, ರಕ್ಷಣಾ ಕಾರ್ಯಾಚರಣೆಯಲ್ಲಿ ರೊಬೊಟ್ ಗಳನ್ನು ನಿಯೋಜಿಸಲು ತೆಲಂಗಾಣ ಸರಕಾರ ರೊಬೊಟಿಕ್ ತಜ್ಞರ ನೆರವು ಪಡೆದಿದೆ. ಸುರಂಗದೊಳಗೆ ಲೋಹದ ತುಣುಕುಗಳು, ಕಾಂಕ್ರೀಟ್ ಅವಶೇಷಗಳು, ಕೆಸರು ಹಾಗೂ ನಿರಂತರವಾದ ನೀರಿನ ಸೋರಿಕೆಯಿಂದ ಈ ಭೂಪ್ರದೇಶವು ರಕ್ಷಣಾ ತಂಡಗಳಿಗೆ ಗಮನಾರ್ಹ ಸವಾಲು ಒಡ್ಡುವುದನ್ನು ಮುಂದುವರಿಸಿದೆ.
ಫೆಬ್ರವರಿ 22ರ ಬೆಳಗ್ಗೆ ಮಣ್ಣು ಕೊರೆಯಲೆಂದು ಇನ್ನಿತರರೊಂದಿಗೆ ಸುರಂಗದೊಳಕ್ಕೆ ಹೊಕ್ಕಿದ್ದ ಎಂಟು ಕಾರ್ಮಿಕರು, ಮೇಲ್ಚಾವಣಿಯ ಪಾರ್ಶ್ವವೊಂದು ಕುಸಿದು ಬಿದ್ದಿದ್ದರಿಂದ ಸುರಂಗದೊಳಗೆ ಸಿಲುಕಿಕೊಂಡಿದ್ದರು.
ತೆಲಂಗಾಣ ಸರಕಾರ ಅವಿಭಜಿತ ಜಿಲ್ಲೆಗಳಾದ ನಲಗೊಂಡ ಹಾಗೂ ಮಹಬೂಬ್ ನಗರ್ ಗಳಿಗೆ ನೀರಾವರಿ ಹಾಗೂ ಕುಡಿಯುವ ನೀರು ಪೂರೈಕೆ ಮಾಡಲೆಂದು 40 ಕಿಮೀ ಉದ್ದದ ಶ್ರೀ ಶೈಲಂ ಎಡದಂಡೆ ಕಾಲುವೆ ಸುರಂಗವನ್ನು ನಿರ್ಮಾಣ ಮಾಡುತ್ತಿದೆ.





