ಹತ್ತು ಸಾವಿರ ಹೆಕ್ಟೇರ್ ಸೆಕ್ಷನ್ 4 ಅಧಿಸೂಚನೆಯಿಂದ ಹೊರಕ್ಕೆ!

ಸಾಂದರ್ಭಿಕ ಚಿತ್ರ
ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡರು ಕರ್ಣಾಟಕ ಭೂ-ಕಂದಾಯ ಕಾಯ್ದೆ 1964 ಕಲಂ-71ರ ಅನ್ವಯ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಅರಣ್ಯ ಮೀಸಲು ಪ್ರದೇಶಗಳಿಂದ ಹೊರತುಪಡಿಸಿರುವ ಹತ್ತು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸರಿಯಾದ ಗಡಿ ವಿಸ್ತೀರ್ಣವನ್ನು ಗುರುತಿಸಿ ಗ್ರಾಮವಾರು, ಸರ್ವೇ ನಂಬರ್ ಗಳನ್ನು ಗುರುತಿಸಲು ಟಾಸ್ಕ್ ಫೋರ್ಸ್ ನ್ನು ಪುನರ್ ರಚಿಸುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ಇಂಧನ ಸಚಿವ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮನವಿ ಮೇರೆಗೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸ್ಥಗಿತಗೊಂಡಿದ್ದ ಟಾಸ್ಕ್ ಫೋರ್ಸ್ ಪುನರ್ ರಚಿಸುವಂತೆ ಅರಣ್ಯ ಅಧಿಕಾರಿಗಳಿಗೆ 01-03-2024 ರಂದು ಸೂಚನೆ ನೀಡಿದ್ದರು. ಈ ಪತ್ರದ ಮೇಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಪ್ಪ ಎಲ್. ನಂದೀಶ್,ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಮಗಳೂರು ಉಪೇಂದ್ರ ಸಿಂಗ್ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಕಾರ್ಯಪಡೆ ಯೋಜನೆ ಅರಣ್ಯ ಭವನ ಬೆಂಗಳೂರು ಇವರಿಗೆ ಶಿಫಾರಸು ಮಾಡಿ ಪ್ರಸ್ತಾವನೆ ಸಲ್ಲಿಸಿದ್ದರು. ಒಂದು ತಿಂಗಳಲ್ಲಿ ಟಾಸ್ಕ್ ಫೋರ್ಸ್ ರಚಿಸುವ ಸಾಧ್ಯತೆ ಇದೆ. ಹತ್ತು ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಅಧಿಸೂಚನೆಯಿಂದ ಹೊರಗಿಡುವ ರಾಜ್ಯ ಮಟ್ಟದ ಟಾಸ್ಕ್ ಫೋರ್ಸ್ ಅಂದಿನ ಬಿಜೆಪಿ ಸರ್ಕಾರ 01-02-2007 ರಚಿಸಿ ಆದೇಶಿಸಿ ಕೆಲವು ಜವಾಬ್ದಾರಿ ನಿಗದಿಪಡಿಸಿತ್ತು.
ಅದರಲ್ಲಿ 1.ಅರಣ್ಯ ಮೀಸಲು ಅಧಿಸೂಚನೆ ಪೂರ್ವದ ಮೀಸಲು ಅರಣ್ಯ ಮತ್ತು ಕಿರು ಅರಣ್ಯ ಪ್ರದೇಶಗಳನ್ನು ಗುರುತಿಸುವುದು.
2.ಅರಣ್ಯ ಮೀಸಲು ಅಧಿಸೂಚನೆ ಸೆಕ್ಷನ್-4ರ ಅಧಿಸೂಚಿತ ಅರಣ್ಯ ಪ್ರದೇಶಗಳನ್ನು ಗುರುತಿಸುವುದು.
3.ಲಭ್ಯವಿರುವ ಅರಣ್ಯ ಮೀಸಲು ಪ್ರದೇಶವನ್ನು ಜಂಟಿಯಾಗಿ ಮೋಜನೆ ಮಾಡಿ ಕರ್ಣಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್-4 ರಂತೆ ಅಧಿಸೂಚನೆ ಪ್ರಸ್ತಾವನೆ ಸಲ್ಲಿಸುವುದು.
4.ಕೈ ಬಿಟ್ಟ 10,000 ಹೆಕ್ಟೇರ್ ಪ್ರದೇಶಕ್ಕೆ ಸಂಬಂಧಿಸಿದಂತೆ ಮೋಜಣಿ ಕಾರ್ಯ ಮತ್ತು ಪರಿಶೀಲನಾ ವರದಿ ಸಲ್ಲಿಸುವುದು
ಈ ಕಾರ್ಯಪಡೆ ರಚಿಸುವಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಮೋಟಮ್ಮ 14-06-2002 ರಲ್ಲಿ ಕಂದಾಯ ಸಚಿವರಿಗೆ ಬರೆದ ಪ್ರಬಲ ಆಕ್ಷೇಪಣೆ ಪತ್ರ ಮತ್ತು ಅಂದಿನ ಕಾನೂನು ಸಚಿವ ಡಿ.ಬಿ.ಚಂದ್ರೇಗೌಡರ ಪ್ರಯತ್ನ ಮುಖ್ಯವಾಗಿತ್ತು. ಮೋಟಮ್ಮ ಅವರ ಆಕ್ಷೇಪಣೆ ಪರಿಗಣಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಹಿಂದಿನ ಆದೇಶಕ್ಕೆ ತಡೆ ನೀಡಿತು. ಮೋಟಮ್ಮ ಅವರ ಮನವಿ ಮತ್ತು ಆಕ್ಷೇಪಣೆ ಪರಿಗಣಿಸಿ ಸರ್ಕಾರ ಕೃಷಿ, ಜನವಸತಿ ಇರುವ ಹತ್ತು ಸಾವಿರ ಪ್ರದೇಶಗಳನ್ನು ಹೊರತುಪಡಿಸಿ ದಿನಾಂಕ 14-03-2005 ರಂದು ಮರು ಆದೇಶ ಹೊರಡಿಸಿತು. ಈ ಬಗ್ಗೆ ಸರ್ಕಾರ ನ್ಯಾಯಲಕ್ಕೆ ಅಫಿಡವಿಟ್ ಸಲ್ಲಿಸಿತು ಕೂಡ. ಅಚ್ಚರಿಯ ವಿಷಯವೆಂದರೆ ಟಾಸ್ಕ್ ಫೋರ್ಸಿಗೆ ನಿಗದಿಪಡಿಸಿದ ಅಂದು ಮತ್ತು ಇಂದು ಮಲೆನಾಡಿನ ಜನರ ಆತಂಕಕ್ಕೆ, ಅನುಮಾನಕ್ಕೆ, ಭಯಕ್ಕೆ ಮತ್ತು ಅರಣ್ಯ ಕಾನೂನಿನ ಉರುಳಿಗೆ ಪರಿಹಾರ ಸೂಚಿಸಬೇಕಿದ್ದ ಪ್ರಧಾನ ಕಾರ್ಯ ಅಧಿಸೂಚನೆಯಿಂದ ಕೈಬಿಟ್ಟ ಹತ್ತು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಮೋಜಣಿ ಕಾರ್ಯ ಮತ್ತು ಪರಿಶೀಲನಾ ವರದಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ. ವಿಪರ್ಯಾಸವೆಂದರೆ ಅರಣ್ಯ ಕಾಯ್ದೆ ಸೆಕ್ಷನ್- 4ರಂತೆ ಅಧಿಸೂಚನೆಗೊಳಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ ಟಾಸ್ಕ್ ಫೋರ್ಸ್ ಅವಧಿಯನ್ನು 2008-2010-2011-2012-2013 ಮತ್ತು 2017ರ ಆದೇಶಗಳಲ್ಲಿ ವಿಸ್ತರಿಸುತ್ತಾ ಬಂದಿತ್ತು. 2018 ರಲ್ಲಿ ಪೂರ್ಣಗೊಂಡಿತ್ತು. ನಂತರ ಬಂದ ಈ ಬಗ್ಗೆ ಮತ್ತೆ ಅಧಿಸೂಚನೆ ಹೊರಡಿಸಲಿಲ್ಲ.
2007 ರಿಂದ 2018ರ ಅವಧಿಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರವನ್ನು ಶಾಸಕರಾಗಿ, ಸಚಿವರಾಗಿ,ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರತಿನಿಧಿಸಿದ್ದ ಡಿ.ಎನ್.ಜೀವರಾಜ್ ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದ್ದರೆ ಇಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅನಧಿಕೃತ ಸಾಗುವಳಿ ಪ್ರಕರಣ, ಅನಧಿಕೃತ ಮನೆ ನಿರ್ಮಾಣ ಪ್ರಕರಣ, ಜಮೀನು ಮಂಜೂರಾಗಿ ಸಾಗುವಳಿ ಚೀಟಿ ನೀಡಲು ಬಾಕಿ ಇರುವ ಪ್ರಕರಣ ಮತ್ತು ಕಂದಾಯ ಇಲಾಖೆಗೆ ಟಿ.ಟಿ. ದಂಡ ಪಾವತಿಸಿರುವ ಪ್ರಕರಣಗಳಲ್ಲಿ ರೈತರು ಮತ್ತು ಸೂರಿಗೆ ಹಕ್ಕುಪತ್ರ ಇಲ್ಲದ ಬಡವರು ಕ್ಷೋಬೆಗೆ ಒಳಗಾಗಿ ಬೀದಿಗೆ ಇಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ.
ಟಾಸ್ಕ್ ಫೋರ್ಸಿಗೆ ನಿಗದಿಪಡಿಸಿರುವ 10,000 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೊಪ್ಪ ಅರಣ್ಯ ವಿಭಾಗಕ್ಕೆ ಸಂಬಂಧಿಸಿದ 9813.76 ಹೆಕ್ಟೇರ್ ಪ್ರದೇಶವಿದೆ.
ಕೊಪ್ಪ, ನರಸಿಂಹರಾಜಪುರ, ಶೃಂಗೇರಿ,ಭಾಗಶಃ ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಪ್ರದೇಶಗಳು ಸೇರಿಕೊಂಡಿದೆ. ಮಲೆನಾಡಿನ ರೈತರ ಮತ್ತು ಬಡವರ ಭೂಮಿ ಹಕ್ಕುಪತ್ರ ಸಮಸ್ಯೆ ಬಗೆಹರಿಸಲು 2005ರ ನಂತರ ಶೃಂಗೇರಿ, ಚಿಕ್ಕಮಗಳೂರು ಮತ್ತು ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಲೋಕಸಭಾ ಸದಸ್ಯರಿಗೆ ಕಾನೂನಿನ ಎಲ್ಲಾ ಅವಕಾಶಗಳು ಇದ್ದರೂ ಇದ್ದ ಎಲ್ಲಾ ಅವಕಾಶಗಳನ್ನು ಕೈಚೆಲ್ಲಿ ಇಂದು ಮಲೆನಾಡಿನ ಜನರನ್ನು ಆತಂಕಕ್ಕೆ ದೂಡಿದ್ದಾರೆ. ಜನ ಇವರ ಬೇಜಾವಾಬ್ದರಿಗೆ ತಕ್ಕ ಶಿಕ್ಷೆ ನೀಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಆದರೆ ಈ ಬಾರಿ ಶೃಂಗೇರಿ, ಮೂಡಿಗೆರೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸುತ್ತಿರುವ ಟಿ.ಡಿ.ರಾಜೇಗೌಡ, ಚಿಕ್ಕಮಗಳೂರು ಶಾಸಕ ತಮ್ಮಯ್ಯ ಮತ್ತು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮಲೆನಾಡಿನ ಭೂಮಿ ಸಮಸ್ಯೆ ಬಗೆಹರಿಸುವ ಗುರುತರ ಜವಾಬ್ದಾರಿ ಇದೆ.
ಕೂಡಲೇ ಟಾಸ್ಕ್ ಫೋರ್ಸ್ ಪುನರ್ ರಚಿಸಿ ಸರ್ಕಾರದಿಂದ ಅದೇಶ ಹೊರಡಿಸುವ ಜವಾಬ್ದಾರಿ ಮತ್ತುಆದಷ್ಟು ಶೀಘ್ರ ಗಡಿ ಗುರುತಿಸಿ ಗ್ರಾಮವಾರು,ಸರ್ವೇ ನಂಬರ್ ಗಳನ್ನು ಗುರುತಿಸಿ ಜನರಿಗೆ ಹಕ್ಕುಪತ್ರ ನೀಡಲು ಮುಂದಾಗಿ.







