ನಕ್ಸಲ್ ಪೀಡಿತ ದಾಂತೆವಾಡಾದಲ್ಲಿ ತೆಂಡೂಲ್ಕರ್ ಪ್ರತಿಷ್ಠಾನದಿಂದ 50 ಕ್ರೀಡಾಂಗಣಗಳ ಅಭಿವೃದ್ಧಿ

ಸಚಿನ್ ತೆಂಡೂಲ್ಕರ್ | PTI
ದಾಂತೆವಾಡಾ: ಛತ್ತೀಸ್ ಗಡದ ದಾಂತೆವಾಡಾ ನಕ್ಸಲ್ಪೀಡಿತ ಜಿಲ್ಲೆ ಎಂಬ ತನ್ನ ಹಣೆಪಟ್ಟಿಯನ್ನು ಕಳಚಿಕೊಳ್ಳುತ್ತಿದ್ದು ಇದೀಗ ಕ್ರೀಡಾಕೇಂದ್ರವಾಗಿ ಬದಲಾಗುತ್ತಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರತಿಷ್ಠಾನದ ಬೆಂಬಲದೊಂದಿಗೆ ಸ್ಥಳೀಯ ಆಡಳಿತವು 50 ಕ್ರೀಡಾಂಗಣಗಳನ್ನು ಅಭಿವೃದ್ಧಿಗೊಳಿಸುತ್ತಿದೆ.
ಜಿಲ್ಲೆಯಲ್ಲಿ ನಕ್ಸಲರ ಹೆಜ್ಜೆಗುರುತುಗಳು ಕ್ರಮೇಣ ಕಡಿಮೆಯಾಗುತ್ತಿದ್ದಂತೆ ಆಡಳಿತವು ಮಾನ್ ದೇಶಿ ಪ್ರತಿಷ್ಠಾನ ಮತ್ತು ಸಚಿನ್ ತೆಂಡೂಲ್ಕರ್ ಪ್ರತಿಷ್ಠಾನಗಳ ಸಹಭಾಗಿತ್ವದಲ್ಲಿ ‘ಮೈದಾನ ಕಪ್’ ಹೆಸರಿನ ವಿಶಿಷ್ಟ ಉಪಕ್ರಮಕ್ಕೆ ಚಾಲನೆ ನೀಡಿದೆ.
ಇದರಡಿ ಕ್ರೀಡಾ ಸಂಸ್ಕೃತಿ ಮತ್ತು ಪ್ರತಿಭೆಯನ್ನು ಉತ್ತೇಜಿಸಲು ದಾಂತೆವಾಡಾದಲ್ಲಿ 50 ಕ್ರೀಡಾಂಗಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
ಯೊಜನೆಯ ಅಂಗವಾಗಿ ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಕನಿಷ್ಠ 20 ಕ್ರೀಡಾ ಮೈದಾನಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಮತ್ತು ಅಕ್ಟೋಬರ್ ವೇಳೆಗೆ ಗುರಿಯನ್ನು ಸಾಧಿಸಲಾಗುವುದು ಎಂದು ದಾಂತೆವಾಡಾ ಜಿಲ್ಲಾಧಿಕಾರಿ ಕುನಾಲ್ ದುಡಾವತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಕಳೆದ ವರ್ಷ ರಾಜ್ಯ ಸರಕಾರವು ದಾಂತೆವಾಡಾ ಮತ್ತು ಇತರ ಆರು ಜಿಲ್ಲೆಗಳನ್ನೊಳಗೊಂಡ ಬಸ್ತಾರ್ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸಲು ಬಸ್ತಾರ್ ಒಲಿಂಪಿಕ್ಸ್ 2024ನ್ನು ಆಯೋಜಿಸಿತ್ತು. ನಕ್ಸಲ್ಪೀಡಿತ ಪ್ರದೇಶಗಳು ಮತ್ತು ಇತರ ಸೂಕ್ಷ್ಮ ಜಿಲ್ಲೆಗಳ ಕ್ರೀಡಾ ಪ್ರತಿಭೆಗಳನ್ನು ಕ್ರೀಡೆಗಳ ಮೂಲಕ ಹೊರಜಗತ್ತಿಗೆ ಪರಿಚಯಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.







