ಜಮ್ಮುಕಾಶ್ಮೀರ | ಭಯೋತ್ಪಾದಕರ ಅಡಗುತಾಣವನ್ನು ಪತ್ತೆಹಚ್ಚಿದ ಭದ್ರತಾಪಡೆ : ಐದು ಐಇಡಿ ವಶಕ್ಕೆ

Photo credit: indiatoday.in
ಹೊಸದಿಲ್ಲಿ : ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗುತಾಣವನ್ನು ಪತ್ತೆಹಚ್ಚಿದ್ದು, ಐದು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿವೆ ಎಂದು ವರದಿಯಾಗಿವೆ.
ಪಹಲ್ಗಾಮ್ನಲ್ಲಿ 26 ಪ್ರವಾಸಿಗರ ಹತ್ಯೆ ಬಳಿಕ ನಡೆಯುತ್ತಿರುವ ಶೋಧ ಕಾರ್ಯದ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಭಾರತೀಯ ಸೇನೆ ಮತ್ತು ಜಮ್ಮುಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆ ವೇಳೆ ಪೂಂಚ್ನ ಸುರಂಕೋಟೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣ ಪತ್ತೆಯಾಗಿದೆ.
ಅಡಗುತಾಣದಲ್ಲಿ ಐಇಡಿಗಳನ್ನು ಮೂರು ಟಿಫಿನ್ ಬಾಕ್ಸ್ಗಳಲ್ಲಿ ಮತ್ತು ಎರಡು ಉಕ್ಕಿನ ಬಕೆಟ್ಗಳಲ್ಲಿ ಬಚ್ಚಿಡಲಾಗಿತ್ತು. ಭದ್ರತಾ ಪಡೆಗಳು ಸ್ಥಳದಿಂದ ಸಂವಹನ ಸಾಧನಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಕಣಿವೆಯಾದ್ಯಂತ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದಕ ವಿರುದ್ಧ ಕಾರ್ಯಾಚರಣೆಗಳನ್ನು ಆರಂಭಿಸಿದ್ದಾರೆ. ಭಯೋತ್ಪಾದಕರ ಶಂಕಿತ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದಾರೆ. ಸಂಶಯಾಸ್ಪದವಾದ ನಿವಾಸಗಳನ್ನು ಕೆಡವಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.





