ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ: ಓರ್ವ ಸಿಆರ್ಪಿಎಫ್ ಜವಾನ ಹುತಾತ್ಮ, 6 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಸಶ್ರೀನಗರ್: ಜಮ್ಮು ಕಾಶ್ಮೀರದ ಕಥುವಾದ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸಿಆರ್ಪಿಎಫ್ ಜವಾನ ಮೃತಪಟ್ಟಿದ್ದು, ಓರ್ವ ಉಗ್ರನೂ ಹತನಾಗಿದ್ದಾನೆ.
ಪ್ರಾರಂಭದಲ್ಲಿ ದೋಡಾ ಎಂಬಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಐದು ಸೈನಿಕರು ಮತ್ತು ಓರ್ವ ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ದೋಡಾದಲ್ಲಿ ಉಗ್ರರ ಕಳೆದ ರಾತ್ರಿ ಚತ್ತರ್ಗಲಾ ಪ್ರದೇಶದ ಸೇನಾ ನೆಲೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಥುವಾ ದಾಳಿಯಲ್ಲಿ ಇಬ್ಬರು ಉಗ್ರರು ಶಾಮೀಲಾಗಿದ್ದರು. ಅವರಲ್ಲೊಬ್ಬ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಇದಕ್ಕೂ ಮುಂಚೆ ಹಲವು ಮನೆಗಳಿಗೆ ತೆರಳಿ ನೀರು ಕೇಳಿದ್ದರೆನ್ನಲಾಗಿದ್ದು ಕೆಲ ಗ್ರಾಮಸ್ಥರು ಜಾಗರೂಕರಾದಾಗ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಓರ್ವ ನಾಗರಿಕನಿಗೆ ಗಾಯಗಳಾಗಿವೆ. ಗ್ರಾಮದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆಂಬ ವರದಿಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಜಮ್ಮು ಎಡಿಜಿಪಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ ಇದರ ಹಿಂದೆ ಪಾಕಿಸ್ತಾನ ಇರಬಹುದೆಂಬ ಸುಳಿವು ನೀಡಿದ್ದಾರೆ.
ಎರಡು ದಿನಗಳ ಹಿಂದೆ ಶಿವ್ ಖೋರಿ ಗುಹೆ ದೇವಸ್ಥಾನಕ್ಕೆ ತೆರಳುತ್ತಿದ್ದ ಒಂದು ಬಸ್ ಮೇಲೆ ದಾಳಿ ನಡೆಸಿದ ಪರಿಣಾಮ ಬಸ್ ಕಂದಕಕ್ಕೆ ಉರುಳಿ ಒಂಬತ್ತು ಜನರು ಸಾವನ್ನಪ್ಪಿ 33 ಮಂದಿ ಗಾಯಗೊಂಡಿದ್ದರು.







