ಟೆಸ್ಲಾ ಭಾರತ ಪ್ರವೇಶ: ಮುಂಬೈನಲ್ಲಿ ಮೊದಲ ಶೋರೂಮ್ ಆರಂಭ; ಬೆಲೆ 59.89 ಲಕ್ಷ ರೂ. ವಿನಿಂದ ಪ್ರಾರಂಭ

Photo credit: PTI
ಮುಂಬೈ:ಅಮೆರಿಕದ ಎಲೆಕ್ಟ್ರಿಕ್ ವಾಹನ ತಯಾರಿಕಾ ದೈತ್ಯ ಟೆಸ್ಲಾ ಸಂಸ್ಥೆ, ಭಾರತದಲ್ಲಿ ತನ್ನ ಮೊದಲ ಶೋರೂಮ್ ಅನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ 4,000 ಚದರ ಅಡಿ ಪ್ರದೇಶದಲ್ಲಿ ಆರಂಭಿಸಿದೆ.
"ಟೆಸ್ಲಾ ಎಕ್ಸ್ಪೀರಿಯೆನ್ಸ್ ಸೆಂಟರ್" ಎಂದು ಕರೆಯಲ್ಪಡುವ ಈ ಶೋರೂಮ್, ಸಂಸ್ಥೆಯು ಭಾರತದ ಮಾರುಕಟ್ಟೆಗೆ ಟೆಸ್ಲಾದ ಬಹುನಿರೀಕ್ಷಿತ ಪ್ರವೇಶದ ಪ್ರಮುಖ ಹಂತವಾಗಿದೆ.
ಈ ಶೋರೂಮ್ನ ಬಾಡಿಗೆ ತಿಂಗಳಿಗೆ 35 ಲಕ್ಷ ರೂಪಾಯಿ ಎಂದು ವರದಿಯಾಗಿದೆ. NDTV ಹಂಚಿಕೊಂಡ ಚಿತ್ರಗಳಲ್ಲಿ, ಟೆಸ್ಲಾ ಲೋಗೋದೊಂದಿಗೆ ಸಂಪೂರ್ಣ ಬ್ರ್ಯಾಂಡ್ ಮಾಡಲಾದ ಮಳಿಗೆಯ ಮುಂಭಾಗ ಮತ್ತು ಶೋರೂಮ್ ಒಳಗೆ ಭಾಗಶಃ ಮುಚ್ಚಿದ ಬಿಳಿ ಟೆಸ್ಲಾ ಕಾರುಗಳ ದೃಶ್ಯಗಳು ಕಾಣಿಸಿವೆ.
ಅಮೆರಿಕ ಮೂಲದ ಕಂಪನಿಯಾದ ಟೆಸ್ಲಾ, ಭಾರತದಲ್ಲಿ ಮಾರುಕಟ್ಟೆ ಸಾಮರ್ಥ್ಯ ಹಾಗೂ ಗ್ರಾಹಕರ ಪ್ರತಿಕ್ರಿಯೆ ಪರಿಗಣಿಸುವ ಉದ್ದೇಶದಿಂದ ಈ ಶೋರೂಮ್ನ್ನು ಸ್ಥಾಪಿಸಿದೆ. ದೇಶದಲ್ಲಿ ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆ ಕಂಪೆನಿಯಿಂದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ಶೋರೂಮ್ ನಲ್ಲಿ ಟೆಸ್ಲಾದ ಪೂರ್ಣ ಎಲೆಕ್ಟ್ರಿಕ್ SUV ಮಾಡೆಲ್ Y ನಿಂತಿರುವುದು ಕಂಡು ಬಂದಿದೆ. ಶಾಂಘೈನಿಂದ ಆಮದು ಮಾಡಲಾದ ಆರು ಮಾಡೆಲ್ Y ಗಳು ಈ ಶೋರೂಮ್ಗೆ ತರಲಾಗಿದ್ದು, ಅವುಗಳು ಅನಾವರಣಕ್ಕೆ ಸಿದ್ಧವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರಗಳಲ್ಲಿ ಫ್ಲಾಟ್ ಬೆಡ್ ಟ್ರಕ್ಗಳ ಮೂಲಕ ಕಾರುಗಳನ್ನು ಮಳಿಗೆಗೆ ತರಲಾಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಮಾಡೆಲ್ Y ಎರಡು ಆವೃತ್ತಿಗಳಲ್ಲಿ ಸಿಗಲಿದೆ: ಲಾಂಗ್ ರೇಂಜ್ RWD ಮತ್ತು ಲಾಂಗ್ ರೇಂಜ್ AWD. ಈ ಕಾರು 15.4-ಇಂಚಿನ ಟಚ್ಸ್ಕ್ರೀನ್, ಡ್ಯುಯಲ್-ಟೋನ್ ಒಳಾಂಗಣ ವಿನ್ಯಾಸ, ವೈರ್ ಲೆಸ್ ಚಾರ್ಜಿಂಗ್, ಧ್ವನಿ ಸಂಕೇತದಲ್ಲಿ ಆಜ್ಞೆ ಸ್ವೀಕರಿಸುವ ವ್ಯವಸ್ಥೆ, ಆಪ್ ಆಧಾರಿತ ಲಾಕ್/ಅನ್ಲಾಕ್ ವ್ಯವಸ್ಥೆ ಮುಂತಾದ ವಿಶಿಷ್ಟ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿದೆ.
ಮಾಡೆಲ್ Y RWD ಅವೃತ್ತಿಯ ಆರಂಭಿಕ ಬೆಲೆ 59.89 ಲಕ್ಷ ರೂಪಾಯಿಯಾಗಿದ್ದು, ಇದು ಸಂಪೂರ್ಣವಾಗಿ ಆಮದು ಮಾಡಲಾದ ಘಟಕಗಳ (CBU) ಮೇಲೆ ವಿಧಿಸಲಾಗುವ 70% ರಿಂದ 100% ಆಮದು ಸುಂಕಗಳನ್ನು ಒಳಗೊಂಡಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಭಾರತದಲ್ಲಿ ಆಮದು ಸುಂಕಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ, ಈ ವೆಚ್ಚಗಳನ್ನು ಕಡಿಮೆ ಮಾಡಲು ಪದೇಪದೇ ಕರೆ ನೀಡುತ್ತಿದ್ದಾರೆ. ಆದರೆ ಭಾರತ ಸರ್ಕಾರ ಟೆಸ್ಲಾವನ್ನು ಸ್ಥಳೀಯವಾಗಿ ಉತ್ಪಾದನೆ ಮಾಡುವಂತೆ ಒತ್ತಾಯಿಸುತ್ತಿದೆ.
ಹೊಸದಿಲ್ಲಿ ಸೇರಿದಂತೆ ಭಾರತದ ಇತರ ಪ್ರಮುಖ ನಗರಗಳಲ್ಲಿ ಶೋರೂಮ್ ಗಳನ್ನು ತೆರೆಯಲು ಟೆಸ್ಲಾ ಯೋಜನೆ ರೂಪಿಸುತ್ತಿದೆ. ಉತ್ಪಾದನಾ ಘಟಕ ಸ್ಥಾಪನೆ ಸಂಬಂಧ ಚರ್ಚೆಗಳು ಮುಂದುವರೆದರೂ, ಇನ್ನೂ ಯಾವುದೇ ಅಂತಿಮ ಘೋಷಣೆ ಹೊರಬಿದ್ದಿಲ್ಲ.
ಟೆಸ್ಲಾದ ಈ ಹೊಸ ಶೋರೂಮ್, ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಭವಿಷ್ಯದಲ್ಲಿ ಸ್ಥಳೀಯ ಉತ್ಪಾದನೆ ಮತ್ತು ಲಾಭದಾಯಕ ಬೆಲೆಗೆ ಟೆಸ್ಲಾ ಕಾರುಗಳ ಲಭ್ಯತೆ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.







