ಕುಲಪತಿ ವಜಾಕ್ಕೆ ಆಗ್ರಹಿಸಿ ತೇಝ್ ಪುರ ವಿ.ವಿ.ಯ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಉಪವಾಸ ಮುಷ್ಕರ

photo:newindianexpress
ತೇಝ್ಪುರ, ಡಿ. 15: ಹಣಕಾಸು ಅವ್ಯವಹಾರದ ಆರೋಪದ ಕುರಿತಂತೆ ತೇಝ್ಪುರ ವಿಶ್ವವಿದ್ಯಾನಿಲಯದ ಕುಲಪತಿ ಶಂಭು ನಾಥ್ ಸಿಂಗ್ ಅವರನ್ನು ಕೂಡಲೇ ವಜಾಗೊಳಿಸುವುದು ಸೇರಿದಂತೆ ತಾವು ಎತ್ತಿದ ಸಮಸ್ಯೆಗಳ ಕುರಿತು ಶಿಕ್ಷಣ ಸಚಿವಾಲಯ (ಎಂಒಇ) ದಿಂದ ಪ್ರತಿಕ್ರಿಯೆ ಆಗ್ರಹಿಸಿ ವಿ.ವಿ.ಯ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಸೋಮವಾರ 9 ಗಂಟೆಗಳ ಕಾಲ ಉಪವಾಸ ಮುಷ್ಕರ ನಡೆಸಿದರು.
ಪ್ರತಿಭಟನಕಾರರು ನವೆಂಬರ್ ಅಂತ್ಯದಿಂದ ಪ್ರತಿಭಟನೆ ನಡೆಸುತ್ತಿರುವುದರಿಂದ ವಿಶ್ವವಿದ್ಯಾನಿಲಯ ಮುಚ್ಚಲಾಗಿದೆ. ಕಳೆದ ವಾರದಿಂದ ಅಂತಿಮ ಪರೀಕ್ಷೆಯನ್ನು ನಡೆಸಲು ಸೀಮಿತವಾಗಿ ತೆರೆಯಲಾಗಿದೆ.
ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯ ಜಂಟಿ ವೇದಿಕೆಯಾದ ತೇಝ್ಪುರ ವಿಶ್ವವಿದ್ಯಾನಿಲಯ ಯುನೈಟೆಡ್ ಫೋರಂ (ಟಿಯುಯುಎಫ್) ಆಶ್ರಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯಿಂದ ಉಪವಾಸ ಮುಷ್ಕರ ನಡೆಸಲಾಗಿದೆ ಎಂದು ವೇದಿಕೆ ಹೇಳಿದೆ.
ಸಿಂಗ್ ವಿರುದ್ಧ ಶಿಕ್ಷಣ ಸಚಿವಾಲಯ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂಬುದು ಈ ಮುಷ್ಕರದ ಆಗ್ರಹವಾಗಿದೆ. ತೆಝ್ಪುರ ವಿ.ವಿ.ಯ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯ ಹೆಚ್ಚುತ್ತಿರುವ ಹತಾಶೆಯನ್ನು ಶಿಕ್ಷಣ ಸಚಿವಾಲಯ ನಿರ್ಲಕ್ಷಿಸುತ್ತಿದೆ. ನಿರಂತರ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿರುವ ಹೊರತಾಗಿಯೂ ಸಚಿವಾಲಯ ಮೌನವಾಗಿದೆ ಎಂದು ಟಿಯುಯುಎಫ್ ಹೇಳಿದೆ.







