ಸಂಬಂಧಿಗಳು ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಲಿದ್ದಾರೆ: ಸಂಜಯ್ ರಾವತ್

PC : NDTV
ಮುಂಬೈ: ಮುಂಬೈ ಮತ್ತಿತರ ಪ್ರಮುಖ ನಗರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋದರ ಸಂಬಂಧಿಗಳಾದ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಸಹಮತದ ಒಪ್ಪಂದವಲ್ಲದಿದ್ದರೂ, ಮೈತ್ರಿಕೂಟ ರಚಿಸಿಕೊಂಡು ಸ್ಪರ್ಧಿಸಲಿದ್ದಾರೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, “ಠಾಕ್ರೆ ಸೋದರರಾದ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಮುಂಬೈ, ಥಾಣೆ, ನಾಶಿಕ್ ಹಾಗೂ ಕಲ್ಯಾಣ್-ಡೊಂಬಿವಿಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲಿದ್ದಾರೆ ಹಾಗೂ ವಿಜಯಿಯಾಗಲಿದ್ದಾರೆ. ರಾಜ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ಅವರ ಸಾಮರ್ಥ್ಯವು ಮರಾಠಿ ಭಾಷಿಕರ ಸಾಮರ್ಥ್ಯವಾಗಿದೆ. ಇನ್ನು ಮುಂದೆ ಯಾವುದೇ ಶಕ್ತಿಯಿಂದಲೂ ಮರಾಠಿ ಭಾಷಿಕರ ಉಕ್ಕಿನ ಮುಷ್ಟಿಯನ್ನು ತುಂಡರಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಅವರಿಗೆ ಮರಾಠಿ ಭಾಷಿಕರ ಬೆಂಬಲವಿದ್ದು, ಶಿವಸೇನೆ (ಉದ್ಧವ್ ಬಣ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ನಾಯಕರ ನಡುವಿನ ಮಾತುಕತೆ ಪ್ರಗತಿಯಲ್ಲಿದೆ ಎಂದು ಸಂಜಯ್ ರಾವತ್ ತಿಳಿಸಿದರು.
ಮುಂಬೈ, ಥಾಣೆ, ಕಲ್ಯಾಣ್-ಡೊಂಬಿವಿಲಿ, ನವಿ ಮುಂಬೈ, ಉಲ್ಲಾಸ್ ನಗರ್, ಭಿವಾಂಡಿ-ನಿಝಾಂಪುರ್, ವಸಾಯಿ ವಿರಾರ್, ಮೀರಾ-ಭಯಾಂಡರ್ ಹಾಗೂ ಪನ್ವೇಲ್ ಅಲ್ಲದೆ ನಾಶಿಕ್ ನಂತಹ ಇನ್ನಿತರ ನಗರಗಳ ಸ್ಥಳೀಯ ಸಂಸ್ಥೆ ಚುನಾವಣೆಗಳು ಬಾಕಿ ಇವೆ. ಈ ನಡುವೆ ಈ ಘೋಷಣೆ ಹೊರಬಿದ್ದಿದೆ.







