ಥಾಣೆ | ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ; ಮಂದಗತಿಯ ತನಿಖೆಗೆ ಹೈಕೋರ್ಟ್ ಅಸಮಾಧಾನ

ಸಾಂದರ್ಭಿಕ ಚಿತ್ರ
ಮುಂಬೈ : ಪೊಸ್ಕೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಜಾರಿಯಲ್ಲಿರುವ ಗಂಭೀರವಾದ ಲೋಪದೋಷಗಳ ಬಗ್ಗೆ ಬಾಂಬೆ ಹೈಕೋರ್ಟ್ ಮಂಗಳವಾರ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.
ಮುಂಬೈ ಸಮೀಪದ ಥಾಣೆಯ ಶಾಲೆಯೊಂದರಲ್ಲಿ ಹಲವಾರು ನರ್ಸರಿ ತರಗತಿಯ ಮಕ್ಕಳ ಮೇಲೆ ನಡೆದ ಲೈಂಗಿಕ ಕಿರುಕುಳದ ಕುರಿತ ಆರೋಪಕ್ಕೆ ಸಂಬಂಧಿಸಿ ಸಲ್ಲಿಸಲಾದ ಅಜಿಯ ವಿಚಾರಣೆ ನಡೆಸಿದ ನ್ಯಾಯಾಲಯವ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಹಲ್ಲೆ ಪ್ರಕರಣಗಳ ತನಿಖೆಗಾಗಿ ಪೊಲೀಸರು, ಆಸ್ಪತ್ರೆಗಳು ಹಾಗೂ ಶಾಲೆಗಳಿಗೆ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನಗಳನ್ನು (ಎಸ್ಓಪಿ) ರೂಪಿಸಲು ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದೆ. ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಅದು ಅತೃಪ್ತಿ ವ್ಯಕ್ತಪಡಿಸಿತು.
ಪ್ರಕರಣದ ತನಿಖಾ ಪ್ರಗತಿ ವರದಿಗೆ ಅಡ್ವೊಕೇಟ್ ಜನರಲ್ ಬೀರೆಂದ್ರ ಸರಾಫ್ ಅವರು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪೊಸ್ಕೊ ಕಾನೂನುಗಳನ್ನು ಜಾರಿ ಕುರಿತ ಸಮಿತಿಯಲ್ಲಿ ಯಾರ್ಯಾರನ್ನು ಸೇರ್ಪಡೆಗೊಳಿಸಬೇಕೆಂಬುದರ ಬಗ್ಗೆ ನ್ಯಾಯಾಲಯವು ಮೂರು ಸಲಹೆಗಳನ್ನು ನೀಡಿತು. ನಿವೃತ್ತ ಐಪಿಎಸ್ ಅಧಿಕಾರಿ ಮೀರಾ ಬೋರ್ವಂಕರ್, ಮಾಜಿ ಬಾಂಬೆ ಹೈಕೋರ್ಟ್ ನ್ಯಾಯಾಎಧೀಶ ಸಾಧನಾ ಜಾಧವ್ ಹಾಗೂ ಶಾಲಿನಿ ಫಾಲಸ್ಕರ್ ಜೋಶಿ ಅವರ ಹೆಸರುಗಳನ್ನು ನ್ಯಾಯಾಲಯವು ಶಿಫಾರಸು ಮಾಡಿದೆ.
ಅಪ್ರಾಪ್ತ ಬಾಲಕರ ಪಾಲನೆಯನ್ನು ಪುರುಷ ಪರಿಚಾರಕರಿಗಿಂತ ಮಹಿಳಾ ಉದ್ಯೋಗಿಗಳೇ ಹೆಚ್ಚು ಉತ್ತಮವಾಗಿ ನಿರ್ವಹಿಸಬಲ್ಲರು. ಆದುದರಿಂದ ಅಪ್ರಾಪ್ತ ಗಂಡುಮಕ್ಕಳ ಹಾಸ್ಟೆಲ್ಗಳಲ್ಲಿ ಮಹಿಳಾ ಪರಿಚಾರಕಿಯರನ್ನು ನೇಮಿಸಿಕೊಳ್ಳಬೇಕೆಂದು ನ್ಯಾಯಾಲಯವು ತಿಳಿಸಿತು.







