ಒಂದು ಘಟನೆಯಿಂದ ವ್ಯಕ್ತಿಯನ್ನು ಅಳೆಯುವುದು ನ್ಯಾಯವಲ್ಲ; ಎಲ್.ಕೆ.ಅಡ್ವಾಣಿಗೆ ಜನ್ಮದಿನದ ಶುಭಾಶಯ ಕೋರಿದ್ದನ್ನು ಸಮರ್ಥಿಸಿದ ತರೂರ್

ಎಲ್.ಕೆ.ಅಡ್ವಾಣಿ , ಶಶಿ ತರೂರ್ | Photo Credit : PTI
ಹೊಸದಿಲ್ಲಿ, ನ.9: ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ತಾನು ಜನ್ಮದಿನದ ಶುಭಾಶಯಗಳನ್ನು ಕೋರಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ರವಿವಾರ ಸಮರ್ಥಿಸಿಕೊಂಡಿದ್ದಾರೆ. ಹಲವು ವರ್ಷಗಳ ಸಾರ್ವಜನಿಕ ಸೇವೆಯನ್ನು ನಡೆಸಿದ ವ್ಯಕ್ತಿಯ ನಡತೆಯನ್ನು ಕೇವಲ ಒಂದು ಘಟನೆಯ ಮೂಲಕ ನಿರ್ಧರಿಸುವುದು ನ್ಯಾಯಯುತವಲ್ಲವೆಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿಯ ಸಂಸ್ಥಾಪನಾ ಸದಸ್ಯ ಹಾಗೂ 2002-2004ರ ಸಾಲಿನಲ್ಲಿ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು ಶನಿವಾರ 98ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
ಅಡ್ವಾಣಿ ಅವರ ಜನ್ಮದಿನದಂದು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ ತರೂರ್, ಹಿರಿಯ ಬಿಜೆಪಿ ನಾಯಕನ ಜೊತೆಗಿರುವ ಛಾಯಾಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಡ್ವಾಣಿಯವರು ಸಾರ್ವಜನಿಕ ಸೇವೆಗೆ ಅಚಲವಾದವಾದ ಬದ್ದತೆಯನ್ನು ಹೊಂದಿದ ನಿಜವಾದ ಮುತ್ಸದ್ದಿ ಎಂದು ತರೂರ್ ಬಣ್ಣಿಸಿದ್ದಾರೆ.
ಆದರೆ ತರೂರ್ ಅವರು ಅಡ್ವಾಣಿಯವರಿಗೆ ಜನ್ಮದಿನದ ಶುಭಾಶಯ ಕೋರಿರುವುದಕ್ಕೆ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ ಅವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ‘‘ತರೂರ್ ಅವರೇ ಕ್ಷಮಿಸಿ, ದ್ವೇಷದ ಬೀಜಗಳನ್ನು ಬಿತ್ತುವುದು ಈ ದೇಶದಲ್ಲಿ ಸಾರ್ವಜನಿಕ ಸೇವೆಯೆನಿಸಿಕೊಳ್ಳುವುದಿಲ್ಲ ’’ ಎಂದು ಅವರು ಎಕ್ಸ್ನಲ್ಲಿ ಹೇಳಿದ್ದಾರೆ. ಬಾಬರಿ ಮಸೀದಿ ದ್ವಂಸಕ್ಕೆ ಮುನ್ನ ಅಡ್ವಾಣಿ 1990ರಲ್ಲಿ ನಡೆಸಿದ ರಾಮರಥಯಾತ್ರೆಯನ್ನು ಉದ್ದೇಶಿಸಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.







