ಸರ್ಕಾರಿ ಅಭಿಯೋಜಕರ ವಿರುದ್ಧವೇ ಆರೋಪಿಗಳಿಂದ ಎಫ್ಐಆರ್ ದಾಖಲು!

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಸರ್ಕಾರಿ ಅಭಿಯೋಜಕರ ವಿರುದ್ಧ ಆರೋಪಿಗಳು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೋಮವಾರ ಮುಂಬೈ ಹೈಕೋರ್ಟ್ಗೆ ಮನವಿ ಮಾಡಿದೆ.
ವಕೀಲ ಶೇಖರ್ ಕಾಕಾಸಾಹೇಬ್ ಜಗತಾಪ್ ಅವರ ಪರ ಹಾಜರಾದ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ಸಿಜೆಐ ಬಿಆರ್.ಗವಾಯಿ ಮತ್ತು ನ್ಯಾಯಮೂತಿಘ ಕೆ.ವಿನೋದ್ ಚಂದ್ರನ್ ಅವರಿರುವ ಪೀಠದ ಮುಂದೆ ವಿವರ ನೀಡಿ, ಅರ್ಜಿದಾರ ಅಭಿಯೋಜಕರು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹಾಗೂ ಉದ್ಯಮಿ ಸಂಜಯ್ ಪುನಮಿಯಾ ವಿರುದ್ಧ ಸುಂದರ್ ಅಗರ್ವಾಲ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಅಭಿಯೋಜಕರಾಗಿದ್ದಾರೆ ಎಂದು ತಿಳಿಸಿದರು.
ಇದರ ರದ್ದತಿಗೆ ಜಗತಾಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ. ಮತ್ತೊಬ್ಬರು ನ್ಯಾಯಮೂರ್ತಿಗಳಿಗೆ ಪ್ರಕರಣ ನಿಯೋಜಿಸಲಾಗಿದ್ದು, ಒಂದು ವರ್ಷದಿಂದ ಪ್ರಕರಣ ಬಾಕಿ ಇದೆ ಎಂದು ಹೇಳಿದರು.
ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿರುವ ಪೀಠದಿಂದ ಪ್ರಕರಣವನ್ನು ವಾಪಾಸು ಮಾಡಿ ತ್ವರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಪರಮ್ ಬೀರ್ ಸಿಂಗ್ ವಿರುದ್ಧದ ಪ್ರಕರಣದ ವಿಚಾರಣೆಗೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಿರುವ ದಾಖಲೆಗಳು ನಕಲಿ ಎಂದು ಜಗತಾಪ್ ವಿರುದ್ಧದ ಎಫ್ಐಆರ್ ನಲ್ಲಿ ವಾದಿಸಲಾಗಿದೆ. ತಮ್ಮ ವಿರುದ್ಧ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘದಲ್ಲಿಯೂ ಹಲವು ದೂರುಗಳನ್ನು ಪುನಾಮಿಯಾ ದಾಖಲಿಸಿದ್ದು, ಇವು ತಿರಸ್ಕತಿಸಲ್ಪಟ್ಟಿವೆ ಎಂದು ಜಗತಾಪ್ ವಿವರಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸದೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾಗಿ ವಾದಿಸಿದ್ದಾರೆ. ಕಳೆದ 23 ವರ್ಷಗಳಿಂದ ಪ್ರಾಕ್ಟೀಸ್ ಮಾಡುತ್ತಿರುವ ತಮ್ಮನ್ನು ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಅಭಿಯೋಜಕರ ಪಟ್ಟಿಗೆ ಸೇರಿಸಿದೆ ಎಂದು ಹೇಳಿದ್ದಾರೆ.







