ವೈದ್ಯೆಯ ಅತ್ಯಾಚಾರ, ಹತ್ಯೆ ಖಂಡಿಸಿ ಅಧ್ಯಾಪಕನಿಂದ ‘ಬಂಗ ರತ್ನ’ ಪ್ರಶಸ್ತಿ ವಾಪಸ್

PC : ANI
ಕೋಲ್ಕತಾ : ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕುರಿತಂತೆ ಪಶ್ಚಿಮಬಂಗಾಳ ಸರಕಾರದ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2019ರಲಿ ಪ್ರದಾನ ಮಾಡಿದ ‘ಬಂಗ ರತ್ನ’ ಪ್ರಶಸ್ತಿಯನ್ನು ಹಿಂದಿರುಗಿಸಲು ಅಲಿಪರದ್ವಾರ್ ನ ಅಧ್ಯಾಪಕ ಪರಿಮಳ್ ಡೇ ನಿರ್ಧರಿಸಿದ್ದಾರೆ.
‘‘ನಾನು ಬಂಗ ರತ್ನ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ. ಬಂಗಾಳ ಹಾಗೂ ಹೊರಗೆ ಪ್ರತಿಭಟನೆ ನಡೆದ ರೀತಿಯನ್ನು ನೋಡಿ ಬಳಿಕ ಪ್ರಶಸ್ತಿಯನ್ನು ಹಿಂದಿರುಗಿಸಬೇಕೆಂದು ನನ್ನ ಅಂತರಾತ್ಮ ಹೇಳುತ್ತಿದೆ. ಪ್ರತಿಭಟನೆಗೆ ನಾನು ಬೆಂಬಲ ನೀಡುತ್ತೇನೆ’’ ಎಂದು ಅವರು ಹೇಳಿದ್ದಾರೆ.
‘‘ಅವರ (ಮಮತಾ ಬ್ಯಾನರ್ಜಿ) ಆಡಳಿತ ಸರಿಯಾದ ರೀತಿಯಲ್ಲಿ ಸಾಗುತ್ತಿಲ್ಲ’’ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ಬೆಳವಣಿಗೆಯೊಂದರಲ್ಲಿ ‘ಪಶ್ಚಿಮಬಂಗಾಳ ಮೋಷನ್ ಪಿಕ್ಟರ್ ಆರ್ಟಿಸ್ಟ್’ ಅತ್ಯಾಚಾರ ಹಾಗೂ ಹಾಗೂ ಹತ್ಯೆಗೀಡಾದ ವೈದ್ಯೆಗೆ ನ್ಯಾಯ ಆಗ್ರಹಿಸಿ ಹಾಗೂ ಕೋಲ್ಕತ್ತಾ ಆಡಳಿತ ಜವಾಬ್ದಾರಿ ವಹಿಸಿಕೊಳ್ಳುವಂತೆ ಒತ್ತಾಯಿಸಿ ಟಾಲಿಗಂಜ್ನಲ್ಲಿ ಪ್ರತಿಭಟನೆ ನಡೆಸಿತು.
ಈ ನಡುವೆ ನೃತ್ಯಗಾರ್ತಿ ಮಮತಾ ಶಂಕರ್ ನೇತೃತ್ವದಲ್ಲಿ ಅವರ ವಿದ್ಯಾರ್ಥಿಗಳ ರ್ಯಾ ಲಿ ನಗರದ ದಕ್ಷಿಣ ಭಾಗದಲ್ಲಿ ನಡೆಯಿತು ಹಾಗೂ ವೈದ್ಯೆಗೆ ನ್ಯಾಯ ನೀಡುವಂತೆ ಆಗ್ರಹಿಸಿತು.
ಪಶ್ಚಿಮಬಂಗಾಳದ ವಿವಿಧ ಭಾಗಗಳಲ್ಲಿ ರ್ಯಾ ಲಿ ಹಾಗೂ ಪ್ರತಿಭಟನೆಗಳು ನಡೆದವು. ಕೋಲ್ಕತ್ತಾದಲ್ಲಿ ಸಿವಿಲ್ ಸೊಸೈಟಿ ಸದಸ್ಯರು ಮೌಲಾಲಿಯಲ್ಲಿರುವ ರಾಮ್ ಲೀಲಾ ಮೈದಾನದಿಂದ ಎಸ್ಪ್ಲಾನೇಡನಲ್ಲಿರುವ ಮೆಟ್ರೋ ಚಾನೆಲ್ ವರೆಗೆ ರ್ಯಾ ಲಿ ನಡೆಸಿದರು. ವೈದ್ಯೆಗೆ ನ್ಯಾಯ ನೀಡುವಂತೆ ಆಗ್ರಹಿಸಿದರು.







