ಬಿಹಾರ ವಿಧಾನಸಭಾ ಚುನಾವಣೆ | ಮತ ಚಲಾವಣೆಗೆ ಮೊದಲೇ ಫಲಿತಾಂಶ ನಿರ್ಧಾರವಾಗಿತ್ತಾ?; “The Bihar Verdict 2025” ವರದಿ ಹೇಳುವುದೇನು?

ಸಾಂದರ್ಭಿಕ ಚಿತ್ರ (PTI)
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವ್ಯವಸ್ಥಿತವಾಗಿ 'ಮತಗಳ ದರೋಡೆ' ನಡೆದಿದೆಯಾ? ಮತ ಚಲಾವಣೆಗೆ ಮೊದಲೇ ಫಲಿತಾಂಶ ನಿರ್ಧಾರವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ವೋಟ್ ಫಾರ್ ಡೆಮಾಕ್ರಸಿ" (VFD) ಬಿಡುಗಡೆ ಮಾಡಿರುವ 'ದಿ ಬಿಹಾರ ವರ್ಡಿಕ್ಟ್ 2025'(The Bihar Verdict 2025) ಎಂಬ ಆಡಿಟ್ ವರದಿ ಪುಷ್ಠಿ ನೀಡಿದ್ದು, ವರದಿಯು 2025ರ ಬಿಹಾರ ವಿಧಾನಸಭಾ ಚುನಾವಣೆಯ ಬಗ್ಗೆ ಗಂಭೀರವಾದ ದೋಷಾರೋಪಗಳನ್ನು ಮಾಡಿದೆ.
ಮಾಜಿ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ, ಕಂಪ್ಯೂಟರ್ ವಿಜ್ಞಾನಿ ಪ್ರೊ. ಹರೀಶ್ ಕರ್ಣಿಕ್ ಮತ್ತು ಡಾ. ಪ್ಯಾರಾ ಲಾಲ್ ಗರ್ಗ್ ಸೇರಿದಂತೆ ತಜ್ಞರು 'ದಿ ಬಿಹಾರ ವರ್ಡಿಕ್ಟ್ 2025' ವರದಿಯನ್ನು ಸಿದ್ಧಪಡಿಸಿದ್ದಾರೆ. ತಜ್ಞರ ತಂಡವು, ಇದು ಕೇವಲ ತಾಂತ್ರಿಕ ದೋಷವಲ್ಲ, 'ಚುನಾವಣಾ ಇಂಜಿನಿಯರಿಂಗ್' ಎಂದು ಕರೆದಿದ್ದಾರೆ.
ಜೂನ್ 24, 2025 ರಂದು ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ( ಎಸ್ಐಆರ್)ಗೆ ಆದೇಶ ನೀಡಿದೆ. ಗಮನಾರ್ಹವೆಂದರೆ, 2003ರಿಂದಲೂ ನಿರಂತರ ಪರಿಷ್ಕರಣೆ ನಡೆಯುತ್ತಿದ್ದು, ಜನವರಿ 2025 ರಲ್ಲಿಯೂ ಒಂದು ಸಮಗ್ರ ಪರಿಷ್ಕರಣೆ ಮುಗಿದಿತ್ತು. ಜೂನ್ 24ರಂದು ಬಿಹಾರದಲ್ಲಿ ಒಟ್ಟು 7.89 ಕೋಟಿ ಮತದಾರರಿದ್ದರು. ಆದರೆ ಆಗಸ್ಟ್ 1ರ ಕರಡು ಪಟ್ಟಿಯಲ್ಲಿ ಈ ಸಂಖ್ಯೆ 7.24 ಕೋಟಿಗೆ ಕುಸಿಯಿತು. ಅಂದರೆ, ಕೇವಲ 37 ದಿನಗಳಲ್ಲಿ 65.69 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.
ವಿಪರೀತ ಸಂಖ್ಯೆಯಲ್ಲಿ ಮತದಾರರು ಮೃತಪಟ್ಟಿರುವುದು ಕಂಡುಬಂದಿದೆ. ಜುಲೈ 21 ರಿಂದ 25 ರ ನಡುವಿನ ಕೇವಲ 3 ದಿನಗಳಲ್ಲಿ 21.27 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಯಿತು. ಇದರಲ್ಲಿ 5.44 ಲಕ್ಷ ಜನರನ್ನು 'ಮೃತಪಟ್ಟಿದ್ದಾರೆ' ಎಂದು ದಾಖಲಿಸಲಾಯಿತು. 'ದಿ ಬಿಹಾರ ವರ್ಡಿಕ್ಟ್ 2025' ಪ್ರಕಾರ ಈ 'ಕಣ್ಮರೆ'ಯಾದ ಮತದಾರರಲ್ಲಿ ಮುಸ್ಲಿಮರು, ದಲಿತರು ಮತ್ತು ವಲಸೆ ಕಾರ್ಮಿಕರೇ ಹೆಚ್ಚಾಗಿದ್ದಾರೆ ಎಂದು ವರದಿಯು ತಿಳಿಸಿದೆ.
ಚುನಾವಣಾ ಆಯೋಗ 'ವಿದೇಶಿಯರನ್ನು' ಪತ್ತೆ ಹಚ್ಚುವ ನೆಪದಲ್ಲಿ ನಡೆಸಿದ ಈ ಪ್ರಕ್ರಿಯೆಯಲ್ಲಿ ಒಬ್ಬನೇ ಒಬ್ಬ ವಿದೇಶಿಗ ಪತ್ತೆಯಾಗಲಿಲ್ಲ. ಬದಲಿಗೆ ಲಕ್ಷಾಂತರ ಭಾರತೀಯ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡರು ಎಂದು ವರದಿಯು ತಿಳಿಸಿದೆ.
ಮತದಾನದ ನಂತರದ ಅಂಕಿಅಂಶಗಳ ದಿಢೀರ್ ಏರಿಕೆಯ 'ಮಿಡ್ನೈಟ್ ಹೈಕ್' ಬಗ್ಗೆಯೂ ವರದಿ ಉಲ್ಲೇಖಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನ ಮುಗಿದ ನಂತರ ಶೇಕಡಾವಾರು ಪ್ರಮಾಣ ಬದಲಾಗುವುದು ಸಹಜ. ಆದರೆ ಬಿಹಾರದಲ್ಲಿ ನವೆಂಬರ್ 12ರಂದು ಚುನಾವಣಾ ಆಯೋಗ ಮತದಾನದ ಪ್ರಮಾಣವನ್ನು ಏಕಾಏಕಿ ಹೆಚ್ಚಿಸಿದೆ ಎಂದು ವರದಿಯು ಗಮನಿಸಿದೆ. ಪುರುಷ ಮತ್ತು ಮಹಿಳಾ ಮತದಾರರ ಪ್ರಮಾಣವನ್ನು ನಿಖರವಾಗಿ ಶೇ.0.18 ರಷ್ಟು ಹೆಚ್ಚಿಸಲಾಯಿತು. ಈ ಮೂಲಕ ಸುಮಾರು 1,34,145 ಮತಗಳನ್ನು ಕೃತಕವಾಗಿ ಸೇರಿಸಲಾಯಿತು ಎಂದು ವರದಿಯು ತಿಳಿಸಿದೆ.
ಈ ಮತಗಳು ಸುಮಾರು 20 ಕ್ಷೇತ್ರಗಳ ಫಲಿತಾಂಶವನ್ನೇ ಬದಲಿಸುವ ಶಕ್ತಿ ಹೊಂದಿದ್ದವು. ಮೊದಲ ಹಂತದ ಮತದಾನದ ಪ್ರಮಾಣವು 64.46% ರಿಂದ 65.08% ಕ್ಕೆ ಏರಿಕೆಯಾಯಿತು. ಎರಡನೇ ಹಂತದಲ್ಲಂತೂ 4% ಕ್ಕೂ ಅಧಿಕ ಏರಿಕೆ ಕಂಡುಬಂದಿದೆ ಎಂದು ವರದಿಯು ತಿಳಿಸಿದೆ.
ಸಣ್ಣ ಅಂತರದ ಗೆಲುವು ಮತ್ತು ಅಂಚೆ ಮತಗಳ ಎಣಿಕೆ ಬಗ್ಗೆ ವಿಶ್ಲೇಷಿಸಿದರೆ ಒಂದು ವಿಶೇಷ ಮಾದರಿ ಕಂಡುಬರುತ್ತದೆ ಎಂದು ವರದಿಯು ತಿಳಿಸಿದೆ. ಎನ್ಡಿಎ (NDA) ಗೆದ್ದಿರುವ ಅನೇಕ ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಅತ್ಯಂತ ಕನಿಷ್ಠವಾಗಿದೆ. ಸೊನ್ನೆಯಿಂದ 15 ಮತಗಳ ಅಂತರವೂ ಕಂಡುಬಂದಿದೆ. ಸುಮಾರು 21 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕೇವಲ ಸೊನ್ನೆಯಿಂದ 15 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಅಚ್ಚರಿಯೆಂದರೆ, ಈ ಪೈಕಿ 14 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 5ರಲ್ಲಿ ಜೆಡಿಯು ಗೆದ್ದಿದೆ. ಕುರ್ಹಾನಿ ಮತ್ತು ರಾಜ್ಗೀರ್ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳು ಪಡೆದ ಮತಗಳು ತಲಾ 1,07,811 ಎಂದು ವರದಿಯು ತಿಳಿಸಿದೆ.
ಎನ್ಡಿಎ ಗೆದ್ದಿರುವ 120 ಕ್ಷೇತ್ರಗಳ ಪೈಕಿ 109 ಕ್ಷೇತ್ರಗಳಲ್ಲಿ ಆ ಅಭ್ಯರ್ಥಿಗಳು ಅಂಚೆ ಮತಗಳ ಎಣಿಕೆಯಲ್ಲಿ ಸೋತಿದ್ದಾರೆ ಎಂದು ವರದಿಯು ತಿಳಿಸಿದೆ.
ಚುನಾವಣಾ ನಿಷ್ಪಕ್ಷತೆಯನ್ನು ಕಾಪಾಡಬೇಕಾದ ಆಯೋಗವು ಆಡಳಿತಾರೂಢ ಪಕ್ಷದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುವ ಅಂಶಗಳನ್ನು ಕೂಡ ವರದಿಯಲ್ಲಿ ಉಲ್ಲೇಖಿಸಿದೆ.
ಸುಮಾರು 1.8 ಲಕ್ಷ 'ಜೀವಿಕಾ ದೀದಿ'ಗಳನ್ನು ಅಂದ್ರೆ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಚುನಾವಣಾ ಸ್ವಯಂಸೇವಕರನ್ನಾಗಿ ಬಳಸಿಕೊಳ್ಳಲಾಯಿತು. ಚುನಾವಣೆಗಿಂತ ಮೊದಲಷ್ಟೇ ಇವರಿಗೆ ಸರಕಾರದ ವಿವಿಧ ಯೋಜನೆಗಳಡಿ ಹಣ ವರ್ಗಾವಣೆಯಾಗಿತ್ತು. ಹೀಗೆ ಆರ್ಥಿಕವಾಗಿ ಸರಕಾರದ ಮೇಲೆ ಅವಲಂಬಿತರಾದವರನ್ನು ಚುನಾವಣಾ ಕೆಲಸಕ್ಕೆ ಬಳಸುವುದು ನೈತಿಕವೇ? ಎಂದು ವರದಿಯು ಪ್ರಶ್ನಿಸಿದೆ.
BLOಗಳ ಮೇಲೆ ತೀವ್ರ ಒತ್ತಡದ ಪ್ರಸ್ತಾಪವೂ ಇದೆ. ಮತದಾರರ ಪಟ್ಟಿ ತಿದ್ದುಪಡಿಗಾಗಿ BLO ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರ ಮೇಲೆ ಅತಿಯಾದ ಒತ್ತಡ ಹೇರಲಾಯಿತು. ಈ ಒತ್ತಡ ತಡೆಯಲಾರದೆ ದೇಶಾದ್ಯಂತ ಕನಿಷ್ಠ 32 ಬಿಎಲ್ಒಗಳು ಹೃದಯಾಘಾತ ಅಥವಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯು ಮಾಹಿತಿ ನೀಡಿದೆ.
ವರದಿಯು ಸಾಂವಿಧಾನಿಕ ಉಲ್ಲಂಘನೆ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿದೆ. ಸಂವಿಧಾನದ ವಿಧಿ 324 ಆಯೋಗಕ್ಕೆ ಅಧಿಕಾರ ನೀಡಿದೆಯಾದರೂ, ಅದು ಸಂಸತ್ತು ರೂಪಿಸಿದ ಕಾನೂನಿಗೆ ಒಳಪಟ್ಟಿರಬೇಕು. ಆದರೆ ಆಧಾರ್ ಇಲ್ಲ ಎಂಬ ನೆಪದಲ್ಲಿ ಅಥವಾ ದಾಖಲೆಗಳ ಹೆಸರಿನಲ್ಲಿ ಮತದಾನದ ಹಕ್ಕನ್ನೇ ಕಸಿದುಕೊಳ್ಳುವುದು ಸಂವಿಧಾನ ಬಾಹಿರವಾಗಿದೆ. ಇದಲ್ಲದೆ ಅತಿ ಸಣ್ಣ ಅಂತರದ ಗೆಲುವುಗಳ ಸಮಗ್ರ ಪರಿಶೀಲನೆ ನಡೆಯಬೇಕಿದೆ. ಒಂದೇ ಮೌಲ್ಯದ ಮತಗಳು ಅನೇಕ ಕ್ಷೇತ್ರಗಳಲ್ಲಿ ಬರುವುದು ಗಣಿತದ ಪ್ರಕಾರ ಅಸಂಭವನೀಯ. ಇದು ಅಲ್ಗಾರಿದಮ್ ಆಧರಿತ ಫಲಿತಾಂಶವೇ ಎಂಬ ಅನುಮಾನವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.







