ಕೇಂದ್ರದ ಸತ್ಯಶೋಧ ಘಟಕ ಪ್ರಸ್ತಾವ ರದ್ದುಪಡಿಸಿದ ಬಾಂಬೆ ಹೈಕೋರ್ಟ್

PC: x.com/htTweets
ಮುಂಬೈ: ತನ್ನದೇ ಸ್ವಂತ ಸತ್ಯಶೋಧ ಘಟಕ (ಎಫ್ ಸಿಯು) ಸ್ಥಾಪಿಸಿ ಸಮಾಜ ಮಾಧ್ಯಮದ ವಿಷಯಗಳನ್ನು ನಕಲಿ, ಸುಳ್ಳು ಅಥವಾ ತಪ್ಪುದಾರಿಗೆ ಎಳೆಯುವಂಥದ್ದು ಎಂದು ವರ್ಗೀಕರಿಸಲು ಅವಕಾಶ ನೀಡುವ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮಾವಳಿಯ ತಿದ್ದುಪಡಿಯನ್ನು ಬಾಂಬೆ ಹೈಕೋರ್ಟ್ ತಳ್ಳಿಹಾಕಿದೆ. ಇದು ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ.
"ಫ್ಯಾಕ್ಟ್ ಚೆಕ್ ಯುನಿಟ್ ಸ್ಥಾಪಿಸುವುದು ಅಸಂವಿಧಾನಿಕ" ಎಂದು ನ್ಯಾಯಮೂರ್ತಿ ಎ.ಎಸ್.ಚಂದೂರ್ ಕರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮುನ್ನ 2024ರ ಜನವರಿಯಲ್ಲಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ನೀಡಿದ ಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಟೈಬ್ರೇಕರ್ ನ್ಯಾಯಾಧೀಶರಾಗಿ ಇವರು ಕಾರ್ಯನಿರ್ವಹಿಸಿದ್ದರು.
"ಎಫ್ ಸಿಯು ಎನ್ನುವುದು ತನ್ನದೇ ಕಾರಣಕ್ಕೆ ವ್ಯಾಜ್ಯನಿರ್ಣಯಕಾರರಿದ್ದಂತೆ" ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಚಂದೂರ್ ಕರ್, 2024ರ ಜನವರಿ 31ರಂದು ನ್ಯಾಯಮೂರ್ತಿ ಪಟೇಲ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದಾರೆ. ಈ ನಿಯಮಾವಳಿ ಇದರ ಗೊಂದಲಕಾರಿ ಅಂಶ ಮತ್ತು ಅಸಮಾನತೆ ಕಾರಣದಿಂದ ಅಸಂವಿಧಾನಿಕ" ಎಂದು ಪಟೇಲ್ ಹೇಳಿದ್ದರು. ಇದೇ ಪೀಠದಲ್ಲಿದ್ದ ನ್ಯಾಯಮೂರ್ತಿ ನೀಳಾ ಗೋಖಲೆಯವರ ಅಭಿಪ್ರಾಯದ ವಿರುದ್ಧ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮೂರನೇ ನ್ಯಾಯಮೂರ್ತಿಗಳು ಇದನ್ನು ನಿರ್ಧರಿಸುವ ಅಗತ್ಯ ಉದ್ಭವಿಸಿತ್ತು.
ಎಫ್ ಸಿಯು ನಿಯಮಾವಳಿಗಳು ವ್ಯಕ್ತಿಗಳಿಗೆ ಹಾಗೂ ಮಧ್ಯವರ್ತಿಗಳ ಮೇಲೆ ಆಘಾತಕಾರಿ ಪರಿಣಾಮ ಬೀರಲಿವೆ. ಒಂದು ವೇಳೆ ಎಫ್ ಸಿಯು ಘಟಕ, ಒಂದು ವಿಷಯವನ್ನು ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಪರಿಗಣಿಸಿದರೆ, ಜಾಲತಾಣ ಕಂಪನಿಗಳ ವಿರುದ್ಧದ ಕ್ರಮದಿಂದ ಸುರಕ್ಷೆಗೆ ಕಾರಣವಾಗಲಿದೆ ಎಂದು ನ್ಯಾಯಮೂರ್ತಿ ಚಂದೂರ್ ಕರ್ ವಿವರಿಸಿದ್ದಾರೆ.







