ಎರಡು ರಾಜ್ಯಗಳಲ್ಲಿ ಮತ ಚಲಾಯಿಸಿ ಫೋಟೊಗಳನ್ನು ಪೋಸ್ಟ್ ಮಾಡಿದ ಮೂವರು ಬಿಜೆಪಿ ಕಾರ್ಯಕರ್ತರು: ದೃಢಪಡಿಸಿದ ಆಲ್ಟ್ ನ್ಯೂಸ್ ತನಿಖಾ ವರದಿ

ಪ್ರಭಾತ ಕುಮಾರ , ಸಂತೋಷ ಓಝಾ , ನಾಗೇಂದ್ರ ಪಾಂಡೆ |Photo Credit ; @zoo_bear
ಹೊಸದಿಲ್ಲಿ,ನ.15: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ಸುದ್ದಿ ಜಾಲತಾಣ ಆಲ್ಟ್ ನ್ಯೂಸ್ ನಡೆಸಿದ ತನಿಖೆಯು ಕನಿಷ್ಠ ಮೂವರು ವ್ಯಕ್ತಿಗಳು ಅನೇಕ ಸ್ಥಳಗಳಲ್ಲಿಯ ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರುಗಳನ್ನು ಹೊಂದಿದ್ದಾರೆ ಮತ್ತು ಎರಡು ವಿಭಿನ್ನ ಸ್ಥಳಗಳಿಂದ ಮತದಾನ ಮಾಡಿದ್ದಾರೆ ಎನ್ನುವುದನ್ನು ದೃಢಪಡಿಸಿದೆ. ಅವರು ಎರಡು ವಿಭಿನ್ನ ರಾಜ್ಯಗಳಲ್ಲಿ ಮತದಾನ ಮಾಡಿದ ನಂತರ ತಮ್ಮ ಫೋಟೊಗಳನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಇದನ್ನು ಬಹಿರಂಗಗೊಳಿಸಿವೆ. ಗಮನಾರ್ಹವಾಗಿ ಈ ಮೂವರೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.
►ಪ್ರಕರಣ 1:ಪ್ರಭಾತ್ ಕುಮಾರ್
ಬಿಜೆಪಿ ಉತ್ತರಾಖಂಡ ಕಿಸಾನ್ ಮೋರ್ಚಾದ ಸಾಮಾಜಿಕ ಮಾಧ್ಯಮ ಸಂಯೋಜಕರಾಗಿರುವ ಪ್ರಭಾತ್ ಕುಮಾರ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ತನ್ನ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆಶ್ಚರ್ಯಕರವೆಂದರೆ, ಅವರು ಈ ಹಿಂದೆ ಉತ್ತರಾಖಂಡದಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು, ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆಗಳಲ್ಲಿ ತಾನು ಮತ ಚಲಾಯಿಸಿದ ಹಲವಾರು ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಪ್ರಭಾತ್ ಕುಮಾರ್ ಬಿಹಾರದ ಸಮಸ್ಟಿಪುರ ಜಿಲ್ಲೆಯ ಸರಾಯ್ರಂಜನ ವಿಧಾನಸಭಾ ಕ್ಷೇತ್ರ ಮತ್ತು ಉತ್ತರಾಖಂಡದ ಧರ್ಮಪುರ ವಿಧಾನಸಭಾ ಕ್ಷೇತ್ರ, ಹೀಗೆ ಎರಡೂ ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಹೊಂದಿರುವುದನ್ನು ಆಲ್ಟ್ ನ್ಯೂಸ್ ತನಿಖೆಯು ದೃಢಪಡಿಸಿದೆ.
►ಪ್ರಕರಣ 2: ಸಂತೋಷ್ ಓಝಾ
ದಿಲ್ಲಿ ಬಿಜೆಪಿಯ ಪೂರ್ವಾಂಚಲ ಮೋರ್ಚಾ ಅಧ್ಯಕ್ಷ ಸಂತೋಷ್ ಓಝಾ ಅವರು ನ.6ರಂದು ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತ ಚಲಾಯಿಸಿದ ಬಳಿಕ ತನ್ನ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೂ ಹಿಂದೆ 2025,ಫೆ.5ರಂದು ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದು,ಅದರ ಫೋಟೊಗಳನ್ನೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅವರು ಬಿಹಾರದ ಬಕ್ಸರ್ ವಿಧಾನಸಭಾ ಕೇತ್ರ ಮತ್ತು ದಿಲ್ಲಿಯ ಗ್ರೇಟರ್ ಕೈಲಾಷ್ ವಿಧಾನಸಭಾ ಕ್ಷೇತ್ರ ಎರಡರಲ್ಲೂ ಮತದಾರರ ಪಟ್ಟಿಗಳಲ್ಲಿ ತನ್ನ ಹೆಸರು ಹೊಂದಿರುವುದನ್ನು ಆಲ್ಟ್ ನ್ಯೂಸ್ ತನಿಖೆಯು ದೃಢಪಡಿಸಿದೆ.
►ಪ್ರಕರಣ 3: ನಾಗೇಂದ್ರ ಪಾಂಡೆ
ದಿಲ್ಲಿಯ ಬಿಜೆಪಿ ಕಾರ್ಯಕರ್ತ ನಾಗೇಂದ್ರ ಪಾಂಡೆ ಅಲಿಯಾಸ್ ನಾಗೇಂದ್ರ ಕುಮಾರ್ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನ.6ರಂದು ಮತ ಚಲಾಯಿಸಿದ ಬಳಿಕ ತನ್ನ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಫೆ.25ರಂದು ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಮತ ಚಲಾಸಿದ್ದು ಅದರ ಫೋಟೊಗಳನ್ನೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅವರು ಬಿಹಾರದ ಸಿವಾನ್ ಜಿಲ್ಲೆಯ ದರೌಲಿ ಮತ್ತು ದಿಲ್ಲಿಯ ದ್ವಾರಕಾ ವಿಧಾನಸಭಾ ಕ್ಷೇತ್ರ ಎರಡಲ್ಲಿಯೂ ಮತದಾರರ ಪಟ್ಟಿಗಳಲ್ಲಿ ಹೆಸರು ಹೊಂದಿರುವುದನ್ನು ಆಲ್ಟ್ ನ್ಯೂಸ್ ಪತ್ತೆ ಹಚ್ಚಿದೆ.
ಬಿಹಾರದಲ್ಲಿ ನಾಗೇಂದ್ರ ಪಾಂಡೆ ಹೆಸರಿನಲ್ಲಿ ಮತ್ತು ದಿಲ್ಲಿಯಲ್ಲಿ ನಾಗೇಂದ್ರ ಕುಮಾರ್ ಹೆಸರಿನಲ್ಲಿ ಅವರು ಮತ ಚಲಾಯಿಸಿದ್ದು,ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಫೋಟೊಗಳು ಅವರದೇ ಆಗಿವೆ.







