2024ರಲ್ಲಿ 57 ಒಸಿಐ ಕಾರ್ಡ್ಗಳನ್ನು ರದ್ದುಗೊಳಿಸಿದ ಕೇಂದ್ರ ಸರಕಾರ

Credit: nrilegalconsultants.in
ಹೊಸದಿಲ್ಲಿ: ಕಳೆದ ವರ್ಷ ಸಾಗರೋತ್ತರ ಭಾರತೀಯ ಪ್ರಜೆ(ಒಸಿಐ) ನೋಂದಣಿಗಳ ರದ್ದತಿಯಲ್ಲಿ ಏರಿಕೆಯಾಗಿದ್ದು, ಕೇಂದ್ರ ಗೃಹ ಸಚಿವಾಲಯವು 2024ರೊಂದರಲ್ಲೇ 57 ಒಸಿಐ ಕಾರ್ಡ್ಗಳನ್ನು ರದ್ದುಗೊಳಿಸಿದೆ.
ಕಳೆದೊಂದು ದಶಕದಲ್ಲಿ ಒಸಿಐ ಕಾರ್ಡ್ಗಳ ರದ್ದತಿಯ ಒಟ್ಟು ಸಂಖ್ಯೆಯ ಅರ್ಧದಷ್ಟು ರದ್ದತಿಗಳು 2024ರಲ್ಲಿ ನಡೆದಿದೆ ಎಂದು ಸುದ್ದಿಸಂಸ್ಥೆ The Hindu ಆರ್ಟಿಐ ಕಾಯ್ದೆಯಡಿ ಪಡೆದುಕೊಂಡ ಮಾಹಿತಿಯು ತೋರಿಸಿದೆ.
ಕೇಂದ್ರ ಸರಕಾರವು ಪೌರತ್ವ ಕಾಯ್ದೆಯ 7ಡಿ ಕಲಮ್ನಡಿ ವ್ಯಕ್ತಿಗಳ ಒಸಿಐ ಸ್ಥಾನಮಾನವನ್ನು ಈ ಕೆಳಗಿನ ಕಾರಣಗಳಿಂದ ರದ್ದುಗೊಳಿಸಬಹುದು.
► ವಂಚನೆ, ಸುಳ್ಳು ಪ್ರಾತಿನಿಧ್ಯ ಅಥವಾ ಯಾವುದೇ ಸತ್ಯಾಂಶವನ್ನು ಬಚ್ಚಿಡುವ ಮೂಲಕ ಒಸಿಐ ಕಾರ್ಡ್ ಪಡೆದಿದ್ದರೆ
► ಕಾರ್ಡ್ದಾರ ಭಾರತದ ಸಂವಿಧಾನದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೆ
► ಭಾರತವು ಯಾವುದೇ ಯುದ್ಧದಲ್ಲಿ ತೊಡಗಿದ್ದ ಸಮಯದಲ್ಲಿ ಸಾಗರೋತ್ತರ ಭಾರತೀಯ ಪ್ರಜೆಯು ಶತ್ರುರಾಷ್ಟ್ರಕ್ಕೆ ಯಾವುದೇ ರೀತಿಯಲ್ಲಿ ನೆರವಾಗಬಹುದಾದ ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆ ಅಥವಾ ಸಂವಹನ ನಡೆಸಿದ್ದರೆ
►7ಎ ಕಲಮ್ನ ಉಪಕಲಂ (1)ರಡಿ ಓಸಿಐ ನೋಂದಣಿಯನ್ನು ಪಡೆದುಕೊಂಡ ಐದು ವರ್ಷಗಳಲ್ಲಿ ಎರಡು ವರ್ಷಗಳಿಗೂ ಕಡಿಮೆಯಲ್ಲದ ಅವಧಿಗೆ ಜೈಲುಶಿಕ್ಷೆಗೆ ಗುರಿಯಾಗಿದ್ದರೆ
2014-2023ರ ನಡುವೆ ಕೇಂದ್ರ ಸರಕಾರವು 7ಡಿ ಕಲಮ್ನಡಿ 122 ಒಸಿಐ ಕಾರ್ಡ್ಗಳನ್ನು ರದ್ದುಗೊಳಿಸಿದ್ದರೆ, 2024ರಲ್ಲಿ 57 ಮತ್ತು 2025ರಲ್ಲಿ(ಮೇ 19ರವರೆಗೆ) 15 ಕಾರ್ಡ್ಗಳನ್ನು ರದ್ದುಗೊಳಿಸಿದೆ.
ಈ ವಾರದ ಪೂರ್ವಾರ್ಧದಲ್ಲಿ ಮೋದಿ ಸರಕಾರವನ್ನು ಟೀಕಿಸಿದ್ದಕ್ಕಾಗಿ ಲಂಡನ್ನ ಶಿಕ್ಷಣ ತಜ್ಞೆ ನಿತಾಶಾ ಕೌಲ್ ಅವರ ಒಸಿಐ ಸ್ಥಾನಮಾನವನ್ನು ರದ್ದುಗೊಳಿಸಲಾಗಿತ್ತು. ಮೋದಿ ಸರಕಾರವು ಕಳೆದ ಕೆಲವು ವರ್ಷಗಳಲ್ಲಿ ತನ್ನ ಹಲವಾರು ಟೀಕಾಕಾರರ ಒಸಿಐ ಕಾರ್ಡಗಳನ್ನು ರದ್ದುಗೊಳಿಸಿದೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
ಫ್ರೆಂಚ್ ಪತ್ರಕರ್ತೆ ವೆನೆಸಾ ಡೌನಕ್(2024),ಸ್ವೀಡನ್ ಮೂಲದ ಶಿಕ್ಷಣ ತಜ್ಞ ಅಶೋಕ ಸ್ವೈನ್( 2023) ಮತ್ತು ಅಮೆರಿಕದ ಪತ್ರಕರ್ತ ರಾಫೆಲ್ ಸ್ಯಾಟರ್(2023) ಸೇರಿದಂತೆ ಹಲವರ ಒಸಿಐ ಕಾರ್ಡಗಳನ್ನು ರದ್ದುಗೊಳಿಸಲಾಗಿದೆ.
ಡೋನಕ್ ಮತ್ತು ಸ್ವೈನ್ ಪ್ರಕರಣದಲ್ಲಿ ಸರಕಾರದ ನಿರ್ಧಾರವನ್ನು ತಳ್ಳಿ ಹಾಕಿರುವ ನ್ಯಾಯಾಲಯವು ಅವರ ಒಸಿಐ ಸ್ಥಾನಮಾದ ಮರುಸ್ಥಾಪಿಸುವಂತೆ ಸರಕಾರಕ್ಕೆ ಸೂಚಿಸಿದೆ. ಸ್ಯಾಟರ್ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.







