ಉತ್ತರಕಾಶಿ ಸುರಂಗ ನಿರ್ಮಿಸಿದ್ದ ಕಂಪನಿಯಿಂದ ರೂ. 55 ಕೋಟಿಯ ಚುನಾವಣಾ ಬಾಂಡ್ ಖರೀದಿ!

Photo: PTI
ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ದೇಣೀಗೆ ನೀಡುವ ಸಲುವಾಗಿ ಖರೀದಿಸಿದ್ದ ಚುನಾವಣಾ ಬಾಂಡ್ಗಳ ಮಾಹಿತಿ ಬಹಿರಂಗವಾಗುತ್ತಿದ್ದಂತೇ ಹಲವು ಕುತೂಹಲಕಾರಿ ಸಂಗತಿಗಳು ಬಹಿರಂಗವಾಗುತ್ತಿವೆ.
ಉತ್ತರಕಾಶಿಯಲ್ಲಿ 2023ರ ನವೆಂಬರ್ 12ರಂದು ಕುಸಿತಗೊಂಡ ಸಿಲ್ಕ್ಯಾರಾ ಸುರಂಗವನ್ನು ನಿರ್ಮಿಸಿದ್ದ ನವಯುಗ ಎಂಜಿನಿಯರಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಕನಿಷ್ಠ 55 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದೆ.
ಸಿಲ್ಕ್ಯಾರಾ ಸುರಂಗ ಕುಸಿದ ಸಂದರ್ಭದಲ್ಲಿ 16 ದಿನಗಳ ಕಾಲ 41 ಮಂದಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು.
ಸುಪ್ರೀಂಕೋರ್ಟ್ ಆದೇಶದಂತೆ ಭಾರತದ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಮಾರ್ಚ್ 14ರಂದು ಬಿಡುಗಡೆ ಮಾಡಿದ ಚುನಾವಣಾ ಬಾಂಡ್ ಮಾಹಿತಿಯ ಪ್ರಕಾರ, ಕಂಪನಿ 2019ರಲ್ಲಿ 45 ಕೋಟಿ ರೂಪಾಯಿ ಮೌಲ್ಯದ ಮತ್ತು 2022ರಲ್ಲಿ 10 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿತ್ತು. ಈ ಪೈಕಿ 30 ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳನ್ನು 2019ರ ಏಪ್ರಿಲ್ 18ರಂದು ಖರೀದಿಸಿತ್ತು.
ಹಣ ದುರುಪಯೋಗ ಪ್ರಕರಣದ ಸಂಬಂಧ 2018ರ ಜುಲೈನಲ್ಲಿ ಈ ಕಂಪನಿಯ ಆವರಣದ ಮೇಳೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ದಾಳಿ ನಡೆಸಿದ್ದರು.2018 ಅಕ್ಟೋಬರ್ ನಲ್ಲಿ ಆದಾಯ ತೆರಿಗೆ ಇಲಾಖೆ ಹೈದರಾಬಾದ್ನಲ್ಲಿ ನವಯುಗ ಎಂಜಿನಿಯರಿಂಗ್ ಕಂಪನಿ ವಿರುದ್ಧ ತೆರಿಗೆ ಕಳ್ಳತನ ಆರೋಪದಲ್ಲಿ ದಾಳಿ ನಡೆಸಿತ್ತು.
ಇದಾದ ಬಳಿಕ ನವಯುಗ ಎಂಜಿನಿಯರಿಂಗ್ ಕಂಪನಿ ತಲಾ ಒಂದು ಕೋಟಿ ರೂಪಾಯಿ ಮೌಲ್ಯದ 30 ಬಾಂಡ್ಗಳನ್ನು ಖರೀದಿಸಿತ್ತು ಎಂದು 'ದಿ ಕ್ವಿಂಟ್' ವರದಿ ಮಾಡಿದೆ. 2023 ಮತ್ತು 2024ರಲ್ಲಿ ಈ ಕಂಪನಿ ಯಾವುದೇ ಬಾಂಡ್ ಖರೀದಿಸಿದ ಬಗ್ಗೆ ವಿವರಗಳು ಲಭ್ಯವಿಲ್ಲ.







