ಸಂಭಲ್ಗೆ ‘‘ಹೊರಗಿನವರ’’ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ
ತಪ್ಪುಗಳನ್ನು ಮರೆಮಾಚಲು ಸರಕಾರದ ಪಿತೂರಿ : ಸಮಾಜವಾದಿ ಪಕ್ಷ
PC : PTI
ಲಕ್ನೋ : ಉತ್ತರಪ್ರದೇಶದ ಸಂಭಲ್ ಜಿಲ್ಲಾಡಳಿತವು ಶನಿವಾರ ಜಿಲ್ಲೆಗೆ ‘‘ಹೊರಗಿನವರ’’ ಪ್ರವೇಶವನ್ನು ಡಿಸೆಂಬರ್ 10ರವರೆಗೆ ನಿಷೇಧಿಸಿದೆ. ನವೆಂಬರ್ 19ರಂದು ನಡೆದ ಹಿಂಸಾಚಾರದ ಬಳಿಕ, ಜಿಲ್ಲೆಯಲ್ಲಿ ಶಾಂತಿ ಮತ್ತು ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ನವೆಂಬರ್ 19ರಂದು, ಸಂಭಲ್ನ ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆ ನಡೆಸುವುದನ್ನು ಪ್ರತಿಭಟಿಸಿ ಸ್ಥಳೀಯರು ನಡೆಸಿದ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
‘‘ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಹೊರಗಿನವರು, ಯಾವುದೇ ಸಾಮಾಜಿಕ ಸಂಘಟನೆ ಅಥವಾ ಸಾರ್ವಜನಿಕ ಪ್ರತಿನಿಧಿಗಳು ಡಿಸೆಂಬರ್ 10ರವರೆಗೆ ಜಿಲ್ಲೆಯ ಗಡಿಯನ್ನು ಪ್ರವೇಶಿಸುವಂತಿಲ್ಲ’’ ಎಂದು ಸಂಭಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯ ಹೇಳಿದರು.
ಶಾಹಿ ಜಾಮಾ ಮಸೀದಿ ಆವರಣದಲ್ಲಿ ನಡೆದ ಸಮೀಕ್ಷೆಯ ವೇಳೆ ಸಂಭವಿಸಿದ ಹಿಂಸೆಯ ಬಗ್ಗೆ ಮಾಹಿತಿ ಕಲೆಹಾಕಲು ಸಮಾಜವಾದಿ ಪಕ್ಷದ 15 ಸದಸ್ಯರ ನಿಯೋಗವೊಂದು ಸಂಭಲ್ಗೆ ಭೇಟಿ ನೀಡಲು ನಿರ್ಧರಿಸಿದ ಬಳಿಕ ಜಿಲ್ಲಾಡಳಿತವು ಈ ನಿರ್ಧಾರ ತೆಗೆದುಕೊಂಡಿದೆ.
ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ನಿಯೋಗದ ನಾಯಕ ಮಾತಾ ಪ್ರಸಾದ್ ಪಾಂಡೆ, ಸಂಭಲ್ಗೆ ಭೇಟಿ ನೀಡಬಾರದು ಎಂಬುದಾಗಿ ವಿನಂತಿಸಲು ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ತನಗೆ ಕರೆ ಮಾಡಿದ್ದರು ಎಂದು ಹೇಳಿದರು.
‘‘ನನಗೆ ಸಂಭಲ್ ಜಿಲ್ಲಾಧಿಕಾರಿ ಕೂಡ ಕರೆ ಮಾಡಿದ್ದು, ಜಿಲ್ಲೆಗೆ ಹೊರಗಿನವರ ಪ್ರವೇಶ ನಿಷೇಧವನ್ನು ಡಿಸೆಂಬರ್ 10ರವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ತಿಳಿಸಿದರು. ಹಾಗಾಗಿ, ನಾನು ಈಗ ಪಕ್ಷದ ಕಚೇರಿಗೆ ಹೋಗಿ ಈ ವಿಷಯದ ಬಗ್ಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ’’ ಎಂದು ಪಾಂಡೆ ತಿಳಿಸಿದರು.
‘‘ಸರಕಾರ ಬಹುಷಃ ಸಂಭಲ್ನಲ್ಲಿ ತಾನು ಮಾಡಿದ ತಪ್ಪುಗಳನ್ನು ಮರೆಮಾಚುವುದಕ್ಕಾಗಿ ಅಲ್ಲಿಗೆ ನಾನು ಹೋಗುವುದನ್ನು ತಡೆಯಲು ಬಯಸಿದೆ. ಯಾಕೆಂದರೆ, ನಮ್ಮ ಭೇಟಿಯು ಸರಕಾರದ ಹಲವು ಪ್ರಮಾದಗಳನ್ನು ಬಹಿರಂಗಗೊಳಿಸುತ್ತಿತ್ತು’’ ಎಂದು ಅವರು ಹೇಳಿದರು.
ಶುಕ್ರವಾರ ರಾತ್ರಿಯಿಂದ ಪಾಂಡೆಯ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇದಕ್ಕೂ ಮೊದಲು, ಸಂಭಲ್ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ವರದಿಯೊಂದನ್ನು ತಯಾರಿಸಲು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ರ ಸೂಚನೆಯಂತೆ ಪಕ್ಷದ ನಿಯೋಗವೊಂದು ಅಲ್ಲಿಗೆ ಶನಿವಾರ ಭೇಟಿ ನೀಡಲಿದೆ ಎಂಬುದಾಗಿ ಸಮಾಜವಾದಿ ಪಕ್ಷದ ರಾಜ್ಯ ಅಧ್ಯಕ್ಷ ಶ್ಯಾಮ್ ಲಾಲ್ ಪಾಲ್ ಘೋಷಿಸಿದ್ದರು.
► ತಪ್ಪುಗಳನ್ನು ಮರೆಮಾಚಲು ಸರಕಾರದ ಪಿತೂರಿ : ಅಖಿಲೇಶ್
ಹೊರಗಿನವರು ಸಂಭಲ್ ಜಿಲ್ಲೆಗೆ ಭೇಟಿ ನೀಡುವುದನ್ನು ನಿಷೇಧಿಸುವ ಜಿಲ್ಲಾಡಳಿತದ ಆದೇಶಕ್ಕೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘‘ನಿಷೇಧವು ಬಿಜೆಪಿ ಸರಕಾರದ ಆಡಳಿತದ ವೈಫಲ್ಯವನ್ನು ಸೂಚಿಸುತ್ತದೆ. ಸರಕಾರವು ಈ ನಿಷೇಧವನ್ನು ಮೊದಲೇ ಗಲಭೆಗೆ ಪ್ರಚೋದಿಸಿದವರ ಮತ್ತು ಜನರು ಭಾವಾವೇಶದ ಘೋಷಣೆಗಳನ್ನು ಕೂಗುವಂತೆ ಮಾಡಿದವರ ವಿರುದ್ಧ ಹೇರಿದ್ದರೆ, ಸಂಭಲ್ನ ಸಾಮರಸ್ಯ ಮತ್ತು ಶಾಂತಿಯ ಪರಿಸ್ಥಿತಿ ಕದಡುತ್ತಿರಲಿಲ್ಲ. ಬಿಜೆಪಿಯು ಇಡೀ ಸಚಿವ ಸಂಪುಟವನ್ನು ಒಮ್ಮೆಲೆ ಬದಲಾಯಿಸುವಂತೆ, ಮೇಲಿನಿಂದ ಕೆಳಗಿನವರೆಗೆ ಸಂಭಲ್ನ ಇಡೀ ಆಡಳಿತ ವ್ಯವಸ್ಥೆಯನ್ನು ಅಮಾನತುಗೊಳಿಸಬೇಕು ಅಥವಾ ವಜಾಗೊಳಿಸಬೇಕು. ಅವರ ವಿರುದ್ಧ ನಿರ್ಲಕ್ಷ್ಯ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಬೇಕು. ಬಿಜೆಪಿ ಇಲ್ಲಿ ಸೋತಿದೆ’’ ಎಂದು ಹೇಳಿದರು.
ಈ ನಡುವೆ, ಕಾಂಗ್ರೆಸ್ ಪಕ್ಷದ ನಿಯೋಗವೊಂದು ಡಿಸೆಂಬರ್ 2ರಂದು ಸಂಭಲ್ಗೆ ಭೇಟಿ ನೀಡುವುದು ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಜಯ್ ರಾಯ್ ತಿಳಿಸಿದ್ದಾರೆ.