‘ಚೊಚ್ಚಲ ಮತದಾನ ಮಾಡಲಿರುವ ನನ್ನನ್ನು ಚುನಾವಣಾ ಆಯೋಗ 124 ವರ್ಷದ ಮುತ್ತಜ್ಜಿಯಾಗಿ ಮಾಡಿದೆ’: ಚುನಾವಣಾ ಆಯೋಗದ ಅಧ್ವಾನದ ಕುರಿತು ಗಮನಸೆಳೆದ ಮಿಂತಾದೇವಿ

ಪ್ರಿಯಾಂಕಾಗಾಂಧಿ | PTI
ಹೊಸದಿಲ್ಲಿ,ಆ.14: ಚುನಾವಣಾ ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿನ ಗೊಂದಲ, ಪ್ರಮಾದಗಳ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬರುತ್ತಿರುವಂತೆಯೇ, 35 ವರ್ಷದ ಯುವತಿಯೊಬ್ಬಳನ್ನು ಮತದಾರಪಟ್ಟಿಯಲ್ಲಿ 124 ವರ್ಷವೆಂದು ನಮೂದಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಪ್ರಕಟಿಸಲಾದ ಬಿಹಾರದ ಕರಡು ಮತದಾರಪಟ್ಟಿಯಲ್ಲಿ ತನ್ನ ವಯಸ್ಸನ್ನು 124 ವರ್ಷ ಎಂದು ನಮೂದಿಸಲಾಗಿದ್ದು, ಚುನಾವಣಾ ಆಯೋಗವು ತನ್ನನ್ನು ‘ಮುತ್ತಜ್ಜಿ’ಯಾಗಿ ಮಾಡಿಬಿಟ್ಟಿದೆ ಎಂದು ಮಿಂತಾದೇವಿ ಆರೋಪಿಸಿದ್ದಾರೆ.
‘‘ಈ ಅಧ್ವಾನಕ್ಕೆ ನಾನು ಯಾರನ್ನು ದೂರಬೇಕು? ಮತಗಟ್ಟೆ ಹಂತದ ಅಧಿಕಾರಿಯ ಭೇಟಿಗಾಗಿ ಕಾದುಕಾದು ನಿರಾಶಳಾದ ಬಳಿಕ ನಾನು ಕೊನೆಗೆ ನನ್ನ ಮತದಾರಗಣತಿ ಫಾರಂ ಅನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿದ್ದೆ’’ ಎಂದು 35 ವರ್ಷದ ಮಿಂತಾ ದೇವಿ ಹೇಳಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧರಿಸಿದ್ದ ಟೀಶರ್ಟ್ನಲ್ಲಿ ಮಿಂತಾದೇವಿಯ ಹೆಸರು ಹಾಗೂ ಛಾಯಾಚಿತ್ರವನ್ನು ಮುದ್ರಿಸಿದ್ದು, ‘124 ನಾಟ್ಔಟ್’ ಎಂದು ಬರೆಯಲಾಗಿತ್ತು. ಆ ಮೂಲಕ ಪ್ರತಿಪಕ್ಷಗಳು ಬಿಹಾರದಲ್ಲಿ ನಡೆಯುತ್ತಿರುವ ಮತದಾಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ನಲ್ಲಿ ವ್ಯಾಪಕ ಲೋಪದೋಷಗಳಿರುವ ಬಗ್ಗೆ ಗಮನಸೆಳೆಯಲು ಯತ್ನಿಸಿದ್ದವು.
ಈ ಮಧ್ಯೆ ಬಿಹಾರದ ಸಿವಾನ್ ಜಿಲ್ಲಾಡಳಿತ ಹೇಳಿಕೆಯೊಂದನ್ನು ನೀಡಿ ದಾರುಡಾ ವಿಧಾನಸಭಾ ಕ್ಷೇತ್ರದ ಭಾವೀ ಮತದಾರಳಾದ ಮಿಂತಾ ದೇವಿ ಅವರನ್ನು ತಾನು ಸಂಪರ್ಕಿಸಿದ್ದು, ಮತದಾರಪಟ್ಟಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ತಿಳಿಸಿದೆ.
ಮಿಂತಾ ದೇವಿ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, 35 ವರ್ಷ ವಯಸ್ಸಿನಲ್ಲಿ ಮೊದಲಬಾರಿಗೆ ಮತದಾನ ಮಾಡಲು ಸಾಧ್ಯವಾಗಲಿರುವುದು ತನಗೆ ರೋಮಾಂಚನವುಂಟು ಮಾಡಿದೆಯೆಂದರು.
ತಾನು ಮತದಾನಕ್ಕೆ ಅರ್ಹಳಾದ ವಯಸ್ಸಿಗೆ ಬಂದ ಆನಂತರ ಹಲವಾರು ಚುನಾವಣೆಗಳು ನಡೆದವು. ಆದರೆ ಆದ್ಯಾಕೋ ಮತದಾರಪಟ್ಟಿಯಲ್ಲಿ ನನ್ನ ಹೆಸರು ದಾಖಲಾಗಿರಲಿಲ್ಲ. ಆದರೆ ಈ ಸಲ ಮತದಾರಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ನನ್ನನ್ನು ಮುತ್ತಜ್ಜಿಯಾಗಿ ಮಾಡಿದರೂ, ಆ ಬಗ್ಗೆ ನಾನು ಚಿಂತಿಸುವುದಿಲ್ಲವೆಂದು ದೇವಿ ಹೇಳಿದ್ದಾರೆ.
‘‘ ನಾನು ಹೆದರುವಂತಹದ್ದೇನೂ ಇಲ್ಲ. ಮತದಾರಗಣತಿ ಫಾರಂನಲ್ಲಿ ನಾನು ಜನಿಸಿದ ವರ್ಷವನ್ನು ಆಧಾರ್ ಕಾರ್ಡ್ ನಲ್ಲಿರುವಂತೆ 1990 ಎಂಬುದಾಗಿಯೇ ಬರೆದಿದ್ದೇನೆ. ಆದರೆ ಕರಡುಮತದಾರಪಟ್ಟಿಯಲ್ಲಿ 1990 ಅನ್ನು 1900 ಎಂದು ಬರೆಯಲಾಗಿದ್ದಲ್ಲಿ ನಾನೇನೂ ಮಾಡಲು ಸಾಧ್ಯವಿಲ್ಲವೆಂದು ಆಕೆ ಹೇಳಿದ್ದಾರೆ.
ಈ ಬಗ್ಗೆ ಸಿವಾನ್ ಜಿಲ್ಲಾಡಳಿತವು ಪ್ರಕಟಣೆಯೊಂದನ್ನು ನೀಡಿ, ಕರಡು ಮತದಾರ ಪಟ್ಟಿಯಲ್ಲ 35 ವರ್ಷದ ಮಿಂತಾ ದೇವಿಯವರ ವಯಸ್ಸನ್ನು ದಾಖಲಿಸುವಲ್ಲಿ ಉಂಟಾಗಿರುವ ಲೋಪವನ್ನು ಸರಿಪಡಿಸಲು ಆಕೆಯಿಂದ ಅರ್ಜಿಯೊಂದನ್ನು ಪಡೆಯಲಾಗಿದೆಯಂದು ಹೇಳಿದೆ.







