ಚುನಾವಣಾ ಆಯೋಗವು ‘‘ಪ್ರಧಾನಿ ನರೇಂದ್ರ ಮೋದಿಯವರ ನಾಯಿ’’ : ಮಹಾರಾಷ್ಟ್ರ ವಿಧಾನ ಪರಿಷತ್ ನ ಕಾಂಗ್ರೆಸ್ ಸದಸ್ಯ ಭಾಯಿ ಜಗತಾಪ್
ಭಾಯಿ ಜಗತಾಪ್ | PC : ANI
ಮುಂಬೈ : ಭಾರತೀಯ ಚುನಾವಣಾ ಆಯೋಗವು ‘‘ಪ್ರಧಾನಿ ನರೇಂದ್ರ ಮೋದಿಯವರ ನಾಯಿಯಾಗಿದೆ’’ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ನ ಕಾಂಗ್ರೆಸ್ ಸದಸ್ಯ ಭಾಯಿ ಜಗತಾಪ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
‘‘ಚುನಾವಣಾ ಆಯೋಗವು ನರೇಂದ್ರ ಮೋದಿಯವರ ಬಂಗಲೆಯ ಹೊರಗೆ ಕುಳಿತಿರುವ ನಾಯಿಯಂತಿದೆ ಮತ್ತು ನಾಯಿಯಂತೆ ವರ್ತಿಸುತ್ತಿದೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಸ್ಥಾಪಿಸಲಾಗಿರುವ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಈಗ ನರೇಂದ್ರ ಮೋದಿಯವರ ಸೂಚನೆಯಂತೆ ವರ್ತಿಸುವ ಕೈಗೊಂಬೆಗಳಾಗಿವೆ’’ ಎಂದು ಭಾಯಿ ಜಗತಾಪ್ ಹೇಳಿರುವುದಾಗಿ ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅವರು ಇಲೆಕ್ಟ್ರಾನಿಕ್ ಮತ ಯಂತ್ರಗಳ ಸಾಚಾತನವನ್ನು ಪ್ರಶ್ನಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗದ ‘‘ಭಟ್ಟಂಗಿತನ’’ದಿಂದಾಗಿ ಭಾರತೀಯ ಪ್ರಜಾಸತ್ತೆಯು ‘‘ಅವಮಾನಕ್ಕೆ ಗುರಿಯಾಗಿದೆ’’ ಎಂದು ಹೇಳಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ಮತಪತ್ರಗಳ ಚುನಾವಣೆ ಬಗ್ಗೆ ಮಾತನಾಡಿದ್ದರು. ಹಾಗಾದರೆ, ಈಗ ಏನಾಗಿದೆ? ಲಾಲ್ ಕೃಷ್ಣ ಅಡ್ವಾಣಿಯವರೂ ಇದೇ ಮಾತುಗಳನ್ನು ಆಡಿದ್ದರು. ಮಹಾರಾಷ್ಟ್ರದಲ್ಲಿ ಚುನಾವಣೆ ಸೋತಿರುವ ಕಾರಣಕ್ಕಾಗಿ ನಾವು ಈ ವಿಷಯವನ್ನು ಎತ್ತುತ್ತಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಅಂದು ನೀವು ಕೂಡ ಅದನ್ನೇ ಹೇಳಿದ್ದೀರಿ. ಈ ಬಗ್ಗೆ ಒಮ್ಮೆ ತನಿಖೆ ಮಾಡಿ. ಇವಿಎಮ್ಗಳು ದೋಷಪೂರಿತವಾಗಿದ್ದರೆ ಅದನ್ನು ಹೊರಗಿಡಿ ಎಂದು ನೀವು ಹೇಳಿದ್ದೀರಿ. ಅದನ್ನೇ ನಾವು ಹೇಳುತ್ತಾ ಇರುವುದು’’ ಎಂದು ಕಾಂಗ್ರೆಸ್ ಎಮ್ಎಲ್ಸಿ ನುಡಿದರು.
‘‘ಇವಿಎಮ್ ತಂತ್ರಜ್ಞಾನವನ್ನು ತಂದಿದ್ದು ಕಾಂಗ್ರೆಸ್. ಯಾಕೆಂದರೆ ಅವುಗಳನ್ನು ಫ್ರಾನ್ಸ್, ಅಮೆರಿಕದಲ್ಲಿ ಬಳಸಲಾಗುತ್ತಿತ್ತು. ಆದರೆ, 2009ರ ಬಳಿಕ ಅವುಗಳ ಬಳಕೆಯ ಬಗ್ಗೆ ಸಂಶಯಗಳು ಹುಟ್ಟಿಕೊಂಡವು’’ ಎಂದರು.
ಚುನಾವಣಾ ಆಯೋಗವನ್ನು ನಾಯಿಗೆ ಹೋಲಿಕೆ ಮಾಡಿರುವುದಕ್ಕಾಗಿ ಮಹಾರಾಷ್ಟ್ರ ಬಿಜೆಪಿಯು ಜಗತಾಪ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
► ಕ್ಷಮೆ ಯಾಚನೆಗೆ ನಕಾರ
ತೀವ್ರ ಟೀಕೆಯ ಹೊರತಾಗಿಯು ಭಾಯಿ ಜಗತಾಪ್ ಚುನಾವಣಾ ಆಯೋಗವನ್ನು ‘‘ನಾಯಿ’’ಗೆ ಹೋಲಿಕೆ ಮಾಡಿರುವುದಕ್ಕೆ ಕ್ಷಮೆ ಕೋರಲು ನಿರಾಕರಿಸಿದ್ದಾರೆ.
‘‘ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ, ಒಂದು ಚೂರೂ ಇಲ್ಲ. ಅವರು ಪ್ರಧಾನಿ ಮತ್ತು ಇತರ ಸಚಿವರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರಾದರೆ, ನಾನು ಹೇಳಿದ್ದು ಸರಿಯಾಗಿಯೇ ಇದೆ. ನಾನು ಕ್ಷಮೆ ಕೋರುವುದಿಲ್ಲ. ಚುನಾವಣಾ ಆಯೋಗ ಇರುವುದು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವುದಕ್ಕಾಗಿಯೇ ಹೊರತು ಒಬ್ಬರ ಸೇವೆ ಮಾಡುವುದಕ್ಕಲ್ಲ. ನಾನು ಏನು ಹೇಳಿರುವೆನೋ ಅದಕ್ಕೆ ನಾನು ಬದ್ಧನಾಗಿದ್ದೇನೆ’’ ಎಂದು ಅವರು ಹೇಳಿದ್ದಾರೆ.