ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಆರೋಪ ತಳ್ಳಿ ಹಾಕಿದ ಚುನಾವಣಾ ಆಯೋಗ
ಡಿ. 3ರಂದು ಚರ್ಚೆಗೆ ಬರುವಂತೆ ಕಾಂಗ್ರೆಸ್ಗೆ ಆಹ್ವಾನ
PC : PTI
ಹೊಸದಿಲ್ಲಿ : ಮಹಾರಾಷ್ಟ್ರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗ ನಿರಾಕರಿಸಿದೆ. ಈ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಡಿಸೆಂಬರ್ 3ರಂದು ಬರುವಂತೆ ಕಾಂಗ್ರೆಸ್ ಪಕ್ಷದ ನಿಯೋಗಕ್ಕೆ ಆಹ್ವಾನ ನೀಡಿದೆ.
ಕಾಂಗ್ರೆಸ್ ವಕೀಲ ಉಮರ್ ಹೋಡ ಅವರಿಗೆ ಬರೆದ ಪತ್ರದಲ್ಲಿ, ಭಾರತೀಯ ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್.ಕೆ. ದಾಸ್, ಸಮಸ್ಯೆಗಳನ್ನು ಆಯೋಗದ ಗಮನಕ್ಕೆ ತಂದಿರುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಿದೆ.
‘‘ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸುವ ಮತ್ತು ತೆಗೆಯುವುದಕ್ಕೆ ಸಂಬಂಧಿಸಿದ ಮೊದಲ ಆರೋಪದ ಬಗ್ಗೆ ಹೇಳುವುದಾದರೆ, ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ನಿಕಟ ಭಾಗೀದಾರಿಕೆಯೊಂದಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅಂತಿಮಗೊಳಿಸಲಾಗುತ್ತದೆ ಎನ್ನುವುದು ಕಾಂಗ್ರೆಸ್ಗೂ ಗೊತ್ತಿದೆ. ಕರಡು ಮತದಾರರ ಪಟ್ಟಿಯ ಪ್ರತಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ಕೊಡಲಾಗುತ್ತದೆ ಮತ್ತು ಪ್ರಕ್ರಿಯೆಯ ಪ್ರತಿ ಹಂತದಲ್ಲಿ ನಡೆಯುವ ಪರಿಶೀಲನೆಯಲ್ಲಿ ರಾಜಕೀಯ ಪಕ್ಷಗಳನ್ನು ಒಳಗೊಳಿಸಲಾಗುತ್ತದೆ’’ ಎಂದು ಚುನಾವಣಾ ಆಯೋಗದ ಪತ್ರ ತಿಳಿಸಿದೆ.
ಶೇಕಡಾವಾರು ಮತದಾನದಲ್ಲಿನ ಅಂತರಕ್ಕೆ ಸಂಬಂಧಿಸಿದ ವಿವಾದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಈ ಹಿಂದೆ ಕಾಂಗ್ರೆಸ್ಗೆ ಬರೆಯಲಾಗಿರುವ ಪತ್ರವೊಂದನ್ನು ಉಲ್ಲೇಖಿಸಿದೆ ಹಾಗೂ ಕಾರಣಗಳನ್ನು ಈಗಾಗಲೇ ತಿಳಿಸಲಾಗಿದೆ ಎಂದಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾನವಾಗಿರುವ ಮತಗಳ ಸಂಖ್ಯೆ ಮತ್ತು ಎಣಿಸಲಾಗಿರುವ ಮತಗಳ ಸಂಖ್ಯೆಗಳ ನಡುವೆ ಅಗಾಧ ವ್ಯತ್ಯಾಸವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆಡಳಿತಾರೂಢ ಬಿಜೆಪಿಯು ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಮ್)ಗಳಲ್ಲಿ ಅವ್ಯವಹಾರ ನಡೆಸಿದೆ ಎಂದು ಅದು ಆರೋಪಿಸಿದೆ. ಮತದಾರರ ಪಟ್ಟಿಯಿಂದ ಹಲವು ಮತದಾರರ ಹೆಸರುಗಳನ್ನು ತೆಗೆಯಲಾಗಿದೆ ಎಂಬುದಾಗಿಯೂ ಅದು ಆರೋಪಿಸಿತ್ತು.
ಈ ವಿಷಯದ ಬಗ್ಗೆ ಮುಖತಃ ಚರ್ಚಿಸಲು ಮಂಗಳವಾರ ತನ್ನ ಕಚೇರಿಗೆ ಬರುವಂತೆ ಚುನಾವಣಾ ಆಯೋಗವು ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ನವೆಂಬರ್ 20ರಂದು ನಡೆದಿದೆ. ನವೆಂಬರ್ 23ರಂದು ಮತ ಎಣಿಕೆ ನಡೆದಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 233 ಸ್ಥಾನಗಳೊಂದಿಗೆ ಕ್ಲೀನ್ಸ್ವೀಪ್ಗೈದಿದೆ.
ಬಿಜೆಪಿ 132 ಸ್ಥಾನಗಳನ್ನು ಗೆದ್ದರೆ, ಏಕನಾಥ ಶಿಂದೆಯ ಶಿವಸೇನೆ ಬಣ 57 ಮತ್ತು ಅಜಿತ್ ಪವಾರ್ರ ಎನ್ಸಿಪಿ 41 ಸ್ಥಾನಗಳಲ್ಲಿ ಜಯ ಗಳಿಸಿದೆ.
ಈ ಚುನಾವಣೆಯ್ಲಲಿ ವಿರೋಧಿ ಮಹಾ ವಿಕಾಸ ಅಘಾಡಿ ಭಾರೀ ಹಿನ್ನಡೆ ಅನುಭವಿಸಿದೆ. ಅದು ಕೇವಲ 46 ಸ್ಥಾನಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಕಾಂಗ್ರೆಸ್ 16 ಸ್ಥಾನಗಳನ್ನು ಗೆದ್ದರೆ, ಶಿವಸೇನೆಯ ಉದ್ಧವ್ ಠಾಕ್ರೆ ಬಣ 20ರಲ್ಲಿ ಮತ್ತು ಎನ್ಸಿಪಿ ಶರದ್ ಪವಾರ್ ಬಣ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.