ಕೋರ್ಟ್ ಶಿಕ್ಷೆಗೆ ಮುನ್ನ 6 ವರ್ಷ ಸರ್ಕಾರಿ ಅಧಿಕಾರಿಯಾಗಿದ್ದ ಹಂತಕ!

ಲಕ್ನೋ: ಉತ್ತರ ಪ್ರದೇಶ ನೀರಾವರಿ ಇಲಾಖೆಯಲ್ಲಿ ಆರು ವರ್ಷ ಅನುಭವ ಹೊಂದಿದ್ದ ಹಿರಿಯ ಸಹಾಯಕನೊಬ್ಬ 11 ವರ್ಷ ಹಿಂದೆ ಕೊಲೆ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿದ್ದ ಆಘಾತಕಾರಿ ಅಂಶ ಇಲಾಖೆ ನಡೆಸಿದ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಶಿಕ್ಷಿತ ಅಧಿಕಾರಿ ಅನೂಪ್ ದುಬೆ ಎಂಬಾತ ಇದೀಗ 35ರ ಆಸುಪಾಸಿನಲ್ಲಿದ್ದು, 2013ರಲ್ಲಿ ನೈನಾಗಢ ಎಂಬಲ್ಲಿ ದೇವೇಂದ್ರ ಸಿಂಗ್ ತೋಮರ್ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ. ಇದೇ ಪ್ರಕರಣದಲ್ಲಿ ಗೌರವ್ ಝಾ, ಕಪಿಲ್ ಶರ್ಮಾ ಮತ್ತು ಆಕಾಶ್ ಬಂಧಿತರಾಗಿದ್ದರು. ದೇವೇಂದ್ರನನ್ನು ದಾರ್ಷ್ಟ್ಯ ನಡವಳಿಕೆಗಾಗಿ ಹತ್ಯೆ ಮಾಡಲು ಈ ಗುಂಪು ಸಂಚು ರೂಪಿಸಿದ್ದು, ಪಿಕ್ ನಿಕ್ ಹೋಗುವ ನೆಪದಲ್ಲಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗುಂಡು ಹೊಡೆದು ಬಳಿಕ ದೇಹವನ್ನು ಸುಟ್ಟುಹಾಕಿತ್ತು.
ಸಂತ್ರಸ್ತ ವ್ಯಕ್ತಿಯ ತಂದೆ ಲಖನ್ ಸಿಂಗ್ ಥೋಮರ್, ನಾಪತ್ತೆಯಾಗಿರುವ ಮಗನ ಬಗ್ಗೆ ವಿಚಾರಿಸಿದಾಗ ಹತ್ಯೆಯ ವಿಷಯವನ್ನು ತಿಳಿಸಿ, ಇದನ್ನು ಬಹಿರಂಗಪಡಿಸಿರೆ ನಿನ್ನನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬೆದರಿಕೆಯ ಹೊರತಾಗಿಯೂ 2013ರ ಮೇ 17ರಂದು ಸಿಂಗ್ ಮಗನ ಸಾವಿನ ಬಗ್ಗೆ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಆರೋಪಿಯ ತಂದೆ ಹಾಗೂ ಮುಖ್ಯ ಎಂಜಿನಿಯರ್ ಮಿಥಿಲೇಶ್ ದುಬೆ, ಆರು ತಿಂಗಳ ಬಳಿಕ ಮಗನಿಗೆ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ತಂದೆ 2018ರಲ್ಲಿ ಮೃತಪಟ್ಟಾಗ ಅನುಕಂಪದ ಆಧಾರದಲ್ಲಿ ಆರೋಪಿ ದುಬೆ ನೀರಾವರಿ ಇಲಾಖೆಯಲ್ಲಿ ಉದ್ಯೋಗ ಪಡೆದ. ಈತನ ವಿರುದ್ಧ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದ್ದರೂ, ಉದ್ಯೋಗ ಪಡೆಯುವಲ್ಲಿ ಈತ ಯಶಸ್ವಿಯಾಗಿದ್ದ. ಕಡ್ಡಾಯ ಪೊಲೀಸ್ ದೃಢೀಕರಣ, ನಡತೆ ಪ್ರಮಾಣಪತ್ರ, ಹಿನ್ನೆಲೆಯ ಪರಿಶೀಲನೆ ಸಂದರ್ಭದಲ್ಲಿ ಕೂಡಾ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.
ಈ ವರ್ಷದ ಆಗಸ್ಟ್ 13ರವರೆಗೂ ದುಬೆ ಕಾರ್ಯನಿರ್ವಹಿಸಿದ್ದು, 14ರಂದು ಪ್ರಕರಣದ ತೀರ್ಪಿನ ದಿನ ಆತ ಕರ್ತವ್ಯಕ್ಕೆ ರಜೆ ಹಾಕಿದ್ದ. ಝಾನ್ಸಿ ನ್ಯಾಯಾಲಯ ಈತ ಹಾಗೂ ಇತರ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ಆತ ಕರ್ತವ್ಯಕ್ಕೆ ಮರಳಿದಾಗ ಇಲಾಖೆ ಈತನ ಹಿನ್ನೆಲೆಯ ಬಗ್ಗೆ ತನಿಖೆ ಆರಂಭಿಸಿದ್ದು, ನ್ಯಾಯಾಲಯದಲ್ಲಿ ಈತ ಶಿಕ್ಷಿತನಾಗಿರುವುದು ಬಹಿರಂಗವಾಯಿತು. ಈ ಪ್ರಕರಣ ಸರ್ಕಾರಿ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ದಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.







