ನಡುಗುವ ನವೆಂಬರ್ ಗೆ ಸಾಕ್ಷಿಯಾದ ರಾಷ್ಟ್ರ ರಾಜಧಾನಿ

PC: PTI/x.com/ndtv
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ತಿಂಗಳ ಸರಾಸರಿ ಕನಿಷ್ಠ ತಾಪಮಾನ 11.5 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದ್ದು, ಐದು ವರ್ಷಗಳಲ್ಲೇ ಮೊದಲ ಬಾರಿಗೆ ನವೆಂಬರ್ ತಿಂಗಳಲ್ಲಿ ಕನಿಷ್ಠ ತಾಪಮಾನ ಇದಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಪ್ರಕಟಿಸಿದೆ.
ಏತನ್ಮಧ್ಯೆ ನಡುಗುವ ಚಳಿಯಿಂದ ಕಂಗೆಟ್ಟಿರುವ ದೆಹಲಿ ಜನತೆಗೆ ಶುಭ ಸೂಚನೆ ಎಂಬಂತೆ ಶನಿವಾರ 10.4 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ವಾಡಿಕೆ ತಾಪಮಾನಕ್ಕಿಂತ 0.1 ಡಿಗ್ರಿಯಷ್ಟು ಅಧಿಕ ಹಾಗೂ ಒಂದು ದಿನ ಹಿಂದೆ ದಾಖಲಾಗಿದ್ದ ಕನಿಷ್ಠ ತಾಪಮಾನಕ್ಕಿಂತ 2.3 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚು. ಆದಾಗ್ಯೂ ವಾಯು ಗುಣಮಟ್ಟ ಇನ್ನೂ ಕಳಪೆಯಾಗಿಯೇ ಮುಂದುವರಿದಿದೆ.
ಮೂರು ವರ್ಷಗಳಲ್ಲೇ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಬುಧವಾರ ದಾಖಲಾಗಿತ್ತು. ಇದು 2022ರ ಬಳಿಕ ನವೆಂಬರ್ನಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶ ಹಾಗೂ ವಾಡಿಕೆ ತಾಪಮಾನಕ್ಕಿಂತ 3 ಡಿಗ್ರಿ ಕಡಿಮೆ. 2022ರ ನವೆಂಬರ್ 29ರಂದು 7.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಆದರೆ ಈ ಬಾರಿ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಅಂಕಿ ಅಂಶಗಳ ಪ್ರಕಾರ, 2020ರಲ್ಲಿ ನವೆಂಬರ್ ತಿಂಗಳ ಸರಾಸರಿ ತಾಪಮಾನ 10.3 ಡಿಗ್ರಿ ಆಗಿತ್ತು ಹಾಗೂ ಏಳು ಬಾರಿ ಉಷ್ಣಾಂಶ 8 ಡಿಗ್ರಿಗಿಂತ ಕಡಿಮೆ ಇತ್ತು. 2020ರ ನವೆಂಬರ್ 23ರಂದು 6.3 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು.
ವಾರಾಂತ್ಯದಲ್ಲಿ ಸ್ವಲ್ಪ ಬೆಚ್ಚಗಿನ ವಾತಾವರಣ ಇದ್ದರೂ, ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿಯಲಿದೆ. ಶೇಕಡ 9-10ರ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.







