ದೆಹಲಿ ಬದಲು ಜೈಪುರಕ್ಕೆ ತಿರುಗಿದ ಜಮ್ಮು-ಕಾಶ್ಮೀರ ಸಿಎಂ ಇದ್ದ ವಿಮಾನ!

ಒಮರ್ ಅಬ್ದುಲ್ಲಾ | PC : X/@OmarAbdullah \ ANI
ಹೊಸದಿಲ್ಲಿ: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನ ಶನಿವಾರ ರಾತ್ರಿ ಪಥ ಬದಲಿಸಿ ಜೈಪುರಕ್ಕೆ ತೆರಳಿದ ಘಟನೆ ವರದಿಯಾಗಿದೆ.
ಈ ಘಟನೆ ಬಗ್ಗೆ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಗೊಂದಲದ ಗೂಡಾಗಿದೆ ಎಂದು ಟೀಕಿಸಿದ್ದಾರೆ.
ಜಮ್ಮುವಿನಿಂದ ಹೊರಟಿದ್ದ ವಿಮಾನ ಜೈಪುರಕ್ಕೆ ವಿಮುಖಗೊಳ್ಳುವ ಮುನ್ನ ಸುಮಾರು ಮೂರು ಗಂಟೆ ಕಾಲ ವಾಯುಮಾರ್ಗದಲ್ಲಿ ಅತಂತ್ರವಾಗಿತ್ತು. ಸಂಚಾರ ದಟ್ಟಣೆ ಅಥವಾ ರಾಷ್ಟ್ರ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಆದ ವ್ಯತ್ಯಯದಿಂದ ವಿಮಾನವನ್ನು ಅಂತಿಮವಾಗಿ ಜೈಪುರಕ್ಕೆ ಕಳುಹಿಸಲಾಯಿತು. ಇದರಿಂದಾಗಿ ಸಿಎಂ ಸೇರಿದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಮಧ್ಯರಾತ್ರಿ ಬಳಿಕ ಅತಂತ್ರರಾದರು. ಮರು ಪ್ರಯಾಣ ಯಾವಾಗ ಪುನಾರಂಭವಾಗಲಿದೆ ಎಮಬ ಬಗ್ಗೆ ಯಾವುದೇ ಸ್ಪಷ್ಟನೆ ಇದುವರೆಗೂ ದೊರಕಿಲ್ಲ ಎನ್ನಲಾಗಿದೆ.
ಎಕ್ಸ್ ಪೋಸ್ಟ್ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ, "ದೆಹಲಿ ವಿಮಾನ ನಿಲ್ದಾಣ.. ಬ್ಲಡಿ ಶಿಟ್ಶೋ. ಜಮ್ಮುವಿನಿಂದ ಹೊರಟು ವಾಯುಮಧ್ಯೆ 3 ಗಂಟೆ ಕಾಲ ಅತಂತ್ರವಾಗಿದ್ದ ಬಳಿಕ ವಿಮಾನವನ್ನು ಜೈಪುರಕ್ಕೆ ವಿಮುಖಗೊಳಿಸಲಾಯಿತು. ಆದ್ದರಿಂದ ನಾನು ನಸುಕಿನ 1 ಗಂಟೆ ವೇಳೆಗೆ ತಾಜಾ ಗಾಳಿಗಾಗಿ ವಿಮಾನದ ಮೆಟ್ಟಿಲತ್ತ ಹೋಗತ್ತಿದ್ದೇನೆ. ಯಾವಾಗ ನಾವು ಮತ್ತೆ ಹೊರಡುತ್ತೇವೆ ಎಂಬ ಕಲ್ಪನೆ ನನಗಿಲ್ಲ" ಎಂದು ಹೇಳಿದ್ದಾರೆ.
ವಿಮಾನದ ಮೆಟ್ಟಿಲುಗಳಲ್ಲಿ ನಿಂತಿರುವ ಸೆಲ್ಫಿಯನ್ನೂ ಅವರು ಪೋಸ್ಟ್ ಮಾಡಿದ್ದಾರೆ.







