ʼಗೋದಾಬಾಯಿ, ಸೂರ್ಯಕಾಂತ್, ನಾಗರಾಜ್ʼ: ರಾಹುಲ್ ಗಾಂಧಿಯ ಹೊಸ ‘ಮತ ವಂಚನೆ’ ಬಾಂಬ್ನ ಪುರಾವೆಗಳು!

Photo credit: PTI
ಹೊಸದಿಲ್ಲಿ: ಗೋದಾಬಾಯಿ, ಸೂರ್ಯಕಾಂತ್, ನಾಗರಾಜ; ಇವು ಭಾರತದ ನಾಗರಿಕರಿಗೆ ಮುಖರಹಿತ ಹೆಸರುಗಳಾಗಿರಬಹುದು, ಆದರೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಅವರು ಗುರುವಾರ ಮತದಾರರ ಹೆಸರುಗಳ ಅಳಿಸುವಿಕೆ ಹಗರಣದಲ್ಲಿ ಮಾಡಿರುವ ತಾಜಾ ಆರೋಪದ ಹಿಂದಿನ ನಿರ್ಣಾಯಕ ‘ಪುರಾವೆ’ಗಳಾಗಿದ್ದಾರೆ.
ಇಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಸಾಫ್ಟ್ವೇರ್ ಒಂದನ್ನು ಬಳಸಿ ಕೇಂದ್ರೀಕೃತ ರೀತಿಯಲ್ಲಿ ರಾಜ್ಯದಲ್ಲಿಯ ಕಾಂಗ್ರೆಸ್ ಭದ್ರಕೋಟೆಗಳಲ್ಲಿಯ ಮತದಾರರ ಪಟ್ಟಿಗಳಲ್ಲಿ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಿಹಾಕಿತ್ತು ಎಂದು ಆರೋಪಿಸಿದರು. ಅಳಂದ ವಿಧಾನಸಭಾ ಕ್ಷೇತ್ರದ ಉದಾಹರಣೆಯನ್ನು ನೀಡಿದ ಅಲ್ಲಿ 6,018 ಮತಗಳನ್ನು ಅಳಿಸಲು ಪ್ರಯತ್ನಿಸಲಾಗಿತ್ತು ಎಂದು ಪ್ರತಿಪಾದಿಸಿದರು.
ಬೂತ್ ಮಟ್ಟದ ಅಧಿಕಾರಿಯೋರ್ವರು ಮತದಾರರ ಪಟ್ಟಿಯಿಂದ ತನ್ನ ಚಿಕ್ಕಪ್ಪನ ಹೆಸರು ನಾಪತ್ತೆಯಾಗಿರುವುದನ್ನು ಗಮನಿಸಿದ್ದರು ಮತ್ತು ಅವರ ಹೆಸರು ಅಳಿಸುವಂತೆ ತನ್ನ ಪರವಾಗಿ ತನ್ನ ನೆರೆಯ ವ್ಯಕ್ತಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದರು ಎನ್ನುವುದನ್ನು ಪತ್ತೆ ಹಚ್ಚಿದ್ದರು, ಹೀಗಾಗಿ ಮತದಾರರ ಹೆಸರುಗಳ ಅಳಿಸುವಿಕೆ ಪ್ರಯತ್ನ ವಿಫಲಗೊಂಡಿತ್ತು ಎಂದು ರಾಹುಲ್ ಹೇಳಿದರು.
ತನ್ನ ಆರೋಪಗಳಿಗೆ ಸಮರ್ಥನೆಯಾಗಿ ಅವರು ಮೂರು ಉದಾಹರಣೆಗಳನ್ನು ನೀಡಿದರು.
1. ಗೋದಾಬಾಯಿ
ಮೊದಲ ಉದಾಹರಣೆಯಾಗಿ ರಾಹುಲ್ ಗೋದಾಬಾಯಿ (63) ಹೆಸರನ್ನು ಉಲ್ಲೇಖಿಸಿದರು. ‘ಗೋದಾಬಾಯಿ’ ಹೆಸರಿನಲ್ಲಿ ನಕಲಿ ಲಾಗಿನ್ ಅನ್ನು ಸೃಷ್ಟಿಸಲಾಗಿತ್ತು ಮತ್ತು ಅವರ ನೆರೆಕರೆಯ 12 ಜನರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ಅಳಿಸುವಂತೆ ಅರ್ಜಿ ಸಲ್ಲಿಸಲು ಈ ನಕಲಿ ಲಾಗಿನ್ನ್ನು ಬಳಸಲಾಗಿತ್ತು ಎಂದು ಅವರು ಆರೋಪಿಸಿದರು. ಅಸಲಿಗೆ ಗೋದಾಬಾಯಿಗೆ ಈ ವಿಷಯವೇ ತಿಳಿದಿಲ್ಲ. ಮತದಾರರ ಹೆಸರುಗಳನ್ನು ಬಳಸಿದ ಈ ಸಂಖ್ಯೆಗಳು ಕರ್ನಾಟಕದ್ದು ಸಹ ಅಲ್ಲ. ಅವು ಎಲ್ಲಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರಶ್ನಿಸಿದ ರಾಹುಲ್ ಸುದ್ದಿಗೋಷ್ಠಿಯಲ್ಲಿ ಗೋದಾಬಾಯಿಯವರ ವೀಡಿಯೊ ಬೈಟ್ನ್ನು ಕೇಳಿಸಿದರು.
ಇದು ಕಾಂಗ್ರೆಸ್ಗೆ ಅನುಕೂಲಕರವಾಗಿದ್ದ ಮತಗಟ್ಟೆಗಳಲ್ಲಿ ಯೋಜಿತ ಕ್ರಮವಾಗಿತ್ತು. 10 ಮತಗಟ್ಟೆಗಳಲ್ಲಿ ಗರಿಷ್ಠ ಅಳಿಸುವಿಕೆ ನಡೆದಿತ್ತು ಎಂದರು. 2018ರ ಚುನಾವಣೆಗಳಲ್ಲಿ ಈ 10 ಮತಗಟ್ಟೆಗಳ ಪೈಕಿ ಎಂಟರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು.
ಇದನ್ನು ಕೇಂದ್ರೀಕೃತ ರೀತಿಯಲ್ಲಿ ವ್ಯಕ್ತಿಗಳ ಬದಲಾಗಿ ಸಾಫ್ಟ್ವೇರ್ ಬಳಸಿ ಮಾಡಲಾಗುತ್ತದೆ ಎಂದು ರಾಹುಲ್ ತಿಳಿಸಿದರು.
2. ಸೂರ್ಯಕಾಂತ
ಸೂರ್ಯಕಾಂತ್ 14 ನಿಮಿಷಗಳಲ್ಲಿ 12 ಮತದಾರರ ಹೆಸರುಗಳನ್ನು ಅಳಿಸಿದ್ದರು ಎಂದು ಹೇಳಿದ ರಾಹುಲ್,ಸೂರ್ಯಕಾಂತ್ ಸಲ್ಲಿಸಿದ್ದ ಅಳಿಸುವಿಕೆ ಅರ್ಜಿಗಳಲ್ಲಿ ಬಬಿತಾ ಚೌಧರಿಯವರ ಹೆಸರೂ ಸೇರಿತ್ತು. ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ ಮತ್ತು ಬಬಿತಾ ಅವರನ್ನು ರಾಹುಲ್ ವೇದಿಕೆಯಲ್ಲಿ ಹಾಜರುಪಡಿಸಿದರು.
3. ನಾಗರಾಜ
ಇನ್ನೊಂದು ಪ್ರಕರಣದಲ್ಲಿ ನಾಗರಾಜ ಎಂಬ ವ್ಯಕ್ತಿ 36 ಸೆಕೆಂಡ್ಗಳಲ್ಲಿ ಎರಡು ಅಳಿಸುವಿಕೆ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಹೇಳಿದ ರಾಹುಲ್ ಗಾಂಧಿ, ಬೆಳಿಗ್ಗೆ 4:07 ಗಂಟೆಗೆ ಈ ಅರ್ಜಿಗಳನ್ನು ಸಲ್ಲಿಸಿದ್ದು ಅನಮಾನಾಸ್ಪದವಾಗಿತ್ತು ಎಂದು ಆರೋಪಿಸಿದರು.
ಎರಡು ಅರ್ಜಿಗಳನ್ನು 36 ಸೆಕೆಂಡ್ಗಳಲ್ಲಿ ಸಲ್ಲಿಸಲಾಗಿತ್ತು. ದಯವಿಟ್ಟು ಈ ಎರಡು ಅರ್ಜಿ ನಮೂನೆಗಳನ್ನು ಭರ್ತಿ ಮಾಡಲು ಪ್ರಯತ್ನಿಸಿ ಮತ್ತು ಅದು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ನೋಡಿ. ಭೌತಿಕವಾಗಿ ಇದನ್ನು ಸಲ್ಲಿಸುವುದು ಅಸಾಧ್ಯ, ಇದನ್ನು ಯಾಂತ್ರೀಕರಣದ ಮೂಲಕ ಮಾಡಲಾಗಿದೆ ಎಂದು ಹೇಳಿದ ರಾಹುಲ್, ಈ ವ್ಯಕ್ತಿ ಅರ್ಜಿಗಳನ್ನು ಸಲ್ಲಿಸಿದ್ದ ಸಮಯವನ್ನು ನೋಡಿ. ಕಾರಣಾಂತರದಿಂದ ಅವರು ನಸುಕಿನ 4:07ಕ್ಕೆ ಎದ್ದಿದ್ದರು ಮತ್ತು ದಿಢೀರನೆ ಎರಡು ಅರ್ಜಿಗಳನ್ನು ಸಲ್ಲಿಸಿದರು ಎಂದರು.
ಮಹಾರಾಷ್ಟ್ರ, ಹರ್ಯಾಣ ಮತ್ತು ಉತ್ತರ ಪ್ರದೇಶಗಳಲ್ಲಿಯೂ ವ್ಯವಸ್ಥಿತವಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಕಾಂಗ್ರೆಸ್ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಅಳಿಸುವಿಕೆಗಳು ನಡೆದಿವೆ ಎಂದು ಆರೋಪಿಸಿದರು.
ರಾಹುಲ್ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು,ಅವುಗಳನ್ನು ಆಧಾರರಹಿತ ಎಂದು ಬಣ್ಣಿಸಿದೆ. ಸಾರ್ವಜನಿಕರು ಆನ್ಲೈನ್ನಲ್ಲಿ ಯಾವುದೇ ಮತದಾರರ ಹೆಸರುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಅದು ಪ್ರತಿಪಾದಿಸಿದೆ.
ಕೃಪೆ: indiatoday.in







