ನಾಲ್ಕನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ
ಉತ್ತರಾಖಂಡ ಸುರಂಗ ಕುಸಿತ

Photo: PTI
ಡೆಹ್ರಾಡೂನ್: ಉತ್ತರಕಾಶಿ-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ 4.5 ಕಿ.ಮೀ.ಉದ್ದದ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡಿರುವ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಬುಧವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
ಲಭ್ಯ ಮಾಹಿತಿಯಂತೆ ಈ ಕಾರ್ಮಿಕರನ್ನು ತೆರವುಗೊಳಿಸಲು ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವಾರು ತೊಡಕುಗಳು ಎದುರಾಗುತ್ತಿವೆ. ರಕ್ಷಣಾ ಕಾರ್ಯಾಚರಣೆಯು ಸಮರೋಪಾದಿಯಲ್ಲಿ ನಡೆಯುತ್ತಿದೆಯಾದರೂ ಹೊಸದಾಗಿ ಸಂಭವಿಸುತ್ತಿರುವ ಭೂಕುಸಿತಗಳಿಂದಾಗಿ ಮೇಲಿನಿಂದ ಕಲ್ಲುಮಣ್ಣು ಬೀಳುತ್ತಿರುವುದು ಅಡ್ಡಿಯನ್ನುಂಟು ಮಾಡುತ್ತಿದೆ.
ಹಾನಿಗೀಡಾಗಿರುವ ಹಳೆಯ ತಂತ್ರಜ್ಞಾನದ ಆಗರ್ ಯಂತ್ರದ ಬದಲು ಈಗ ಡ್ರಿಲ್ಲಿಂಗಾಗಿ ದಿಲ್ಲಿಯಿಂದ ಅತ್ಯಾಧುನಿಕ ಯಂತ್ರಗಳನ್ನು ತರಲಾಗುತ್ತಿದ್ದು, ಭಾರತೀಯ ವಾಯುಪಡೆಯ ನೆರವಿನೊಂದಿಗೆ ಅವುಗಳನ್ನು ಸುರಂಗ ಸ್ಥಳಕ್ಕೆ ಸಾಗಿಸಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವು.
ಕೊರೆಯುವ ಕಾರ್ಯಕ್ಕಾಗಿ ವೇಗವಾಗಿ ಕೆಲಸ ಮಾಡುವ ನೂತನ ಅಮೆರಿಕ ನಿರ್ಮಿತ ಆಗರ್ ಯಂತ್ರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಕ.ದೀಪಕ ಪಾಟೀಲ್ ತಿಳಿಸಿದರು. ಈ ಸಮಗ್ರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಈಗ ಮಿಲಿಟರಿ ಮತ್ತು ಭಾರತೀಯ ವಾಯುಪಡೆ ಕೂಡ ಸಕ್ರಿಯವಾಗಿವೆ.
ಮೂಲಗಳ ಪ್ರಕಾರ ನೂತನ ಅಮೆರಿಕ ನಿರ್ಮಿತ ಆಗರ್ ಯಂತ್ರವು 4.42 ಮೀ.ಉದ್ದ,2.22 ಮೀ.ಅಗಲ ಮತ್ತು 2 ಮೀ.ಎತ್ತರವಿದ್ದು,25 ಟನ್ ಭಾರವಿದೆ.
ಆಗರ್ ಕೊರೆಯುವ ಯಂತ್ರದ ಕೆಲಸ ಮಂಗಳವಾರ ರಾತ್ರಿ ಆರಂಭಗೊಂಡಿತ್ತು. ಯಂತ್ರದ ಮೂಲಕ ಅವಶೇಷಗಳ ನಡುವೆ ಸುಮಾರು ಮೂರು ಮೀ.ಉದ್ದದ ಕೊಳವೆಯನ್ನೂ ಸೇರಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಯಂತ್ರದಲ್ಲಿ ತಾಂತ್ರಿಕ ದೋಷವುಂಟಾಗಿ ಮಧ್ಯದಲ್ಲಿಯೇ ಕೆಲಸ ಸ್ಥಗಿತಗೊಂಡಿದೆ.
ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರ ಸ್ಥಿತಿ ಈಗ ಹದಗೆಡತೊಡಗಿದೆ ಎಂದು ಸುರಂಗದ ಬಳಿಯಿದ್ದವರು ತಿಳಿಸಿದರು.
ಸುರಂಗದೊಳಗಿರುವ ಕೆಲವು ಕಾರ್ಮಿಕರು ಜ್ವರ, ಮೈಕೈ ನೋವು ಮತ್ತು ನಿಶ್ಶಕ್ತಿಯ ಬಗ್ಗೆ ದೂರಿಕೊಂಡಿದ್ದು, ಅಧಿಕಾರಿಗಳು ತಕ್ಷಣ ಕೊಳವೆಗಳ ಮೂಲಕ ಔಷಧಿಗಳನ್ನು ಕಳುಹಿಸಿದ್ದಾರೆ.
ಬುಧವಾರ ಸುರಂಗದ ಹೊರಗೆ ಕಾಯುತ್ತಿರುವ ಸಹೋದ್ಯೋಗಿ ಕಾರ್ಮಿಕರ ಪ್ರತಿಭಟನೆ ಭುಗಿಲೆದ್ದಿದೆ. ನಿರಂತರ ಕಾರ್ಯಾಚರಣೆಯನ್ನು ಬೆಂಬಲಿಸಲು ಯಂತ್ರಗಳಿಲ್ಲ ಮತ್ತು ರಕ್ಷಣಾ ಕಾರ್ಯವು ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದ ಕುಪಿತ ಕಾರ್ಮಿಕರು, ಎರಡನೇ ಯಂತ್ರವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕಿತ್ತು ಎಂದು ಹೇಳಿದರು.
Next Story







