ಜೀತಪದ್ಧತಿ ದೇಶದಲ್ಲಿ ಇಂದಿಗೂ ಜೀವಂತ!
► ದೇಶದಲ್ಲಿ 13 ಲಕ್ಷಕ್ಕೂ ಅಧಿಕ ಜೀತಕಾರ್ಮಿಕರು ► 2023-24ರಲ್ಲಿ ಕೇವಲ 468 ಕಾರ್ಮಿಕರಿಗಷ್ಟೇ ಜೀತಪದ್ಧತಿಯಿಂದ ಮುಕ್ತಿ

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಉತ್ತರಪ್ರದೇಶದ ಸಹರಣ್ಪುರದ ನಿವಾಸಿಯೊಬ್ಬರು ತನ್ನ ಪುತ್ರನ ವಿವಾಹಕ್ಕಾಗಿ ಗುತ್ತಿಗೆದಾರರೊಬ್ಬರಿಂದ 10 ಸಾವಿರ ರೂ. ಸಾಲ ಪಡೆದಿದ್ದರು. ಆತ ಸಾಲ ಮರುಪಾವತಿಸಲು ವಿಫಲನಾದಾಗ, ಗುತ್ತಿಗೆದಾರನು ಬಿಲ್ಡರ್ ಒಬ್ಬನೊಂದಿಗೆ ಸೇರಿಕೊಂಡು ತಂದೆ ಹಾಗೂ ಆತನ ಇಬ್ಬರು ಪುತ್ರರನ್ನು ಬಲವಂತವಾಗಿ ದಿಲ್ಲಿಯ ಚಾವ್ರಿ ಬಝಾರ್ನಲ್ಲಿ ಜೀತಕ್ಕಿರಿಸಿದ್ದರು. ಕೆಲಸದ ಸ್ಥಳದಲ್ಲೇ ಅವರನ್ನು ಕೂಡಿಹಾಕಲಾಗಿತ್ತು. ಅವರಿಗೆ ಯಾವುದೇ ವೇತನ ನೀಡಲಾಗುತ್ತಿರಲಿಲ್ಲ.
ಎಂಟು ತಿಂಗಳುಗಳ ಕಾಲ ದಿನದ 24 ತಾಸುಗಳ ಕಾಲವೂ ಅವರನ್ನು ಜೀತಕ್ಕೆ ದುಡಿಸಲಾಗುತ್ತಿತ್ತು. ಆದರೆ ಒಮ್ಮೆ ಕಿರಿಯ ಪುತ್ರನಿಗೆ ದುಡಿಮೆಯ ಸಂದರ್ಭ ಕಣ್ಣಿಗೆ ತೀವ್ರ ಗಾಯವಾಗಿತ್ತು. ಆತನ ವೈದ್ಯಕೀಯ ಖರ್ಚುವೆಚ್ಚವನ್ನು ತಪ್ಪಿಸುವುದಕ್ಕಾಗಿ ಬಿಲ್ಡರ್ ಹಾಗೂ ಕಂಟ್ರಾಕ್ಟರ್, ಅವರನ್ನು ಹೊರದಬ್ಬಿದ್ದರು.
ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದಾಗಿ ಕಿರಿಯ ಪುತ್ರನ ಕಣ್ಣಿನ ಪರಿಸ್ಥಿತಿ ವಿಷಮಗೊಂಡಿತ್ತು.
ಊಳಿಗಮಾನ್ಯ ಪದ್ಧತಿಯಿದ್ದ ಮಧ್ಯಯುಗೀನ ಕಾಲದ ಕತೆಯಂತಿರುವ ಈ ಘಟನೆ 2024ರಲ್ಲಿ ನಡೆದಿತ್ತು ಅದು ಕೂಡಾ ಭಾರತದ ಸಂಸತ್ಭವನದಿಂದ ಕೇವಲ 5 ಕಿ.ಮೀ. ದೂರದಲ್ಲಿ!
2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು 2030ರೊಳಗೆ 1.84 ಕೋಟಿ ಜೀತದ ಕಾರ್ಮಿಕರನ್ನು ವಿಮೋಚನೆಗೊಳಿಸುವ ಹಾಗೂ ಅವರನ್ನು ಪುನರ್ವಸತಿಗೊಳಿಸುವ ಗುರಿಯನ್ನು ಪ್ರಕಟಿಸಿತ್ತು. ಜೀತ ಪದ್ದತಿಯನ್ನು ನಿರ್ಮೂಲಗೊಳಿಸಲು 2016ರಲ್ಲಿ ಕೇಂದ್ರ ಸರಕಾರ ದೃಢಸಂಕಲ್ಪ ಮಾಡಿತು ಮತ್ತು ಅದನ್ನು ಕಾನೂನುಬಾಹಿರವೆಂದು ಘೋಷಿಸಿತ್ತು. ಇದಕ್ಕಾಗಿ ಜೀತಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆಯನ್ನು ಅದು ಜಾರಿಗೊಳಿಸಿತ್ತು.
ಆದಾಗ್ಯೂ ಈ ಅನಿಷ್ಟ ಪದ್ದತಿಯು ಭಾರತೀಯ ಸಮಾಜದಲ್ಲಿ ಇವತ್ತಿಗೂ ಮುಂದುವರಿದಿದೆಯೆಂದು ‘ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ನ ಅಧ್ಯಯನ ವರದಿಯೊಂದು ತಿಳಿಸಿದೆ.
ಜೀತಪದ್ದತಿಯು ಹೊಸ ರೂಪಗಳಲ್ಲಿ ತಲೆಯೆತ್ತುವುದನ್ನು ತಡೆಯಲು ಶಿಕ್ಷೆಯ ಪ್ರಕ್ರಿಯೆಗೆ ಹೆಚ್ಚಿನ ಬಲವನ್ನು ತುಂಬಬೇಕು ಹಾಗೂ ಎಲ್ಲಾ ತಪ್ಪಿತಸ್ಥರು ಕಾನೂನಿನ ಕುಣಿಕೆಗೆ ಸಿಲುಕುವುದನ್ನು ಖಾತರಿಪಡಿಸಬೇಕೆಂದು ಕೇಂದ್ರ ಸರಕಾರದ ಜೀತಪದ್ಧತಿ ನಿರ್ಮೂಲನೆ ಕುರಿತ ದೂರದೃಷ್ಟಿಯ ವರದಿ ಹೇಳುತ್ತದೆ. ಆದರೆ ಜೀತಪದ್ಧತಿಯ ಪ್ರಕರಣಗಳಲ್ಲಿ ಸಂತ್ರಸ್ತರ, ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವಲ್ಲಿ ವೈಫಲ್ಯ, ಸಂತ್ರಸ್ತರನ್ನು ಜೀತಕಾರ್ಮಿಕರೆಂದು ಗುರುತಿಸಲಾಗದೆ ಇರುವುದು, ಅವರ ಪುನರ್ವಸತಿ ಕಾರ್ಯಕ್ರಮಗಳಿಗೆ ಹಿನ್ನಡೆಯುಂಟು ಮಾಡಿದೆ.
ಜೀತಪದ್ಧತಿಯ ಬಹುತೇಕ ಪ್ರಕರಣಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಅವರಿಗೆ ಸಾಲತೀರುವಳಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿಲ್ಲ, ಅವರ ವೇತನಗಳು ಪಾವತಿಯಾಗದೆ ಉಳಿಯುತ್ತವೆ ಮತ್ತು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ.
► ಜೀವ ತೆಗೆದ ಜೀತಪದ್ಧತಿ!
ಹರ್ಯಾಣದ ಸೋನಿಪತ್ ನಲ್ಲಿ ನಡೆದ ಘಟನೆಯೊಂದರಲ್ಲಿ 10 ಸಾವಿರ ಮುಂಗಡಹಣವನ್ನು ಪಡೆದುಕೊಂಡಿದ್ದಕ್ಕಾಗಿ ಉತ್ತರಪ್ರದೇಶದ ಭಾಗಪತ್ಜಿಲ್ಲೆಯ ಎಂಟು ಮಂದಿ ಸದಸ್ಯರ ಕುಟುಂಬವನ್ನು ಐದೂವರೆ ತಿಂಗಳ ಅವಧಿಗೆ ಜೀತಕ್ಕೆ ದುಡಿಸಲಾಗಿತ್ತು.
ಅವರಲ್ಲಿ ಒಂದು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಕರಾಗಿದ್ದರು. ಅವರಿಗೆ ಒಂದೇ ಒಂದು ರೂ. ವೇತನ ನೀಡದೆ ದುಡಿಸಲಾಗುತ್ತಿತ್ತು. ಬದುಕುವುದಕ್ಕಾಗಿ ಅವರಿಗೆ ಕನಿಷ್ಠ ಪ್ರಮಾಣದ ಆಹಾರವನ್ನು ನೀಡಲಾಗುತ್ತಿತ್ತು.
ಹಸಿವನ್ನು ತಾಳಲಾಗದೆ ಕುಟುಂಬ ಸದಸ್ಯರೊಬ್ಬರು ಸ್ಥಳದಿಂದ ಪರಾರಿಯಾದರು. ಮಾರನೆ ದಿನ ಇತರ ಸದಸ್ಯರು ಕೂಡಾ ತಮ್ಮ ಸಾಮಾಗ್ರಿಗಳನ್ನು ತೊರೆದು ಪಲಾಯನ ಮಾಡಿ, ತಮ್ಮ ನಗರವನ್ನು ಸೇರಿದ್ದರು. ಆದರೆ ದಾರಿ ಮಧ್ಯೆ ಅವರ ಪೈಕಿ ಯುವತಿಯೊಬ್ಬಳ ದೇಹಸ್ಥಿತಿ ಹದಗೆಟ್ಟಿದ್ದು, ಮನೆ ತಲುಪುವ ವೇಳೆಗೆ ಶವವಾಗಿದ್ದಳು!







