ಆರೋಪಪಟ್ಟಿ ಸಲ್ಲಿಕೆ ಬಳಿಕ ಆರೋಪಿಗಳ ಬಂಧನಕ್ಕೆ ಸುಪ್ರೀಂ ಅಸಮ್ಮತಿ

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ಯಾವುದೇ ಪ್ರಕರಣಗಳಲ್ಲಿ ತನಿಖೆಯ ವೇಳೆ ಆರೋಪಿಯನ್ನು ಬಂಧಿಸದೇ, ಆರೋಪಪಟ್ಟಿ ಸಲ್ಲಿಕೆಯಾಗಿ ಅದು ಕೋರ್ಟ್ ಗಮನಕ್ಕೆ ಬಂದ ಬಳಿಕ ಆರೋಪಿಯನ್ನು ಬಂಧಿಸುವ ಕ್ರಮಕ್ಕೆ ಸುಪ್ರೀಂಕೋರ್ಟ್ ಅಸಮ್ಮತಿ ಸೂಚಿಸಿದೆ.
ಉತ್ತರ ಪ್ರದೇಶ ಪೊಲೀಸರು ಇಂಥ ಕ್ರಮವನ್ನು ಅನುಸರಿಸುತ್ತಿರುವುದಾಗಿ ಕೋರ್ಟ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಅಚ್ಚರಿಪಡಿಸಿದ ಸುಪ್ರೀಂಕೋರ್ಟ್ ಈ ಕ್ರಮವನ್ನು ಅಸಾಮಾನ್ಯ ಎಂದು ಹೇಳಿದೆ. ಇಂಥ ಕ್ರಮದಲ್ಲಿ ಯಾವುದೇ ಅರ್ಥವಿಲ್ಲ ಎಂದು ವಿಶ್ಲೇಷಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್.ಮಾಧವನ್ ಅವರನ್ನೊಳಗೊಂಡ ನ್ಯಾಯಪೀಠ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, "ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆ ಬಳಿಕ ಅದನ್ನು ನ್ಯಾಯಾಲಯ ಪರಿಗಣಿಸಿದ ಬಳಿಕ ಉತ್ತರ ಪ್ರದೇಶ ಪೊಲೀಸರು ಆರೋಪಿಯನ್ನು ಬಂಧಿಸಿರುವುದನ್ನು ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ನಾವು ಅಸಾಮಾನ್ಯ ಹಾಗೂ ಅರ್ಥಹೀನ ಎಂದು ಹೇಳುವುದಕ್ಕಿಂತ ಹೆಚ್ಚು ಏನನ್ನೂ ಹೇಳುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.
"ಒಮ್ಮೆ ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಕೋರ್ಟ್ನ ಮುಂದೆ ಹಾಜರಾಗಲು ಆರೋಪಿಗಳಿಗೆ ಸೂಚಿಸಲಾಗುತ್ತದೆ. ವಿಚಾರಣಾ ನ್ಯಾಯಾಲಯದ ಸಮಾಧಾನಕ್ಕೆ ಜಾಮೀನು ಒದಗಿಸುವಂತೆ ಸೂಚಿಸಲಾಗುತ್ತದೆ" ಎಂದು ವಿವರಿಸಿದೆ. ಒಂದು ವೇಳೆ ತನಿಖಾಧಿಕಾರಿ ಅರ್ಜಿದಾರನ ವಿಚಾರಣೆಗೆ ಬಯಸಿದರೆ, ತನಿಖೆಯ ವೇಳೆಯೇ ಆರೋಪಿಯನ್ನು ಬಂಧಿಸಬೇಕಾಗುತ್ತದೆ. ಇದೀಗ ಅಧಿಕೃತ ಬಂಧನ ಮಾಡುವುದರಲ್ಲಿ ಅರ್ಥವಿಲ್ಲ ಎಂದು ವಿಶ್ಲೇಷಿಸಿದೆ.





