ಹತ್ಯೆ ಪ್ರಕರಣದ ತನಿಖೆಯಲ್ಲಿ ಉತ್ತರ ಪ್ರದೇಶ ಪೊಲೀಸರ ನಿರ್ಲಕ್ಷ್ಯ ; ಮರಣ ದಂಡನೆಗೆ ಗುರಿಯಾದ ಆರೋಪಿಯನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಉತ್ತರಪ್ರದೇಶ ಪೊಲೀಸರ ನಿರ್ಲಕ್ಷ್ಯದ ತನಿಖೆಯಿಂದ 2012ರಲ್ಲಿ ತನ್ನ ಕುಟುಂಬದ 6 ಮಂದಿ ಸದಸ್ಯರನ್ನು ಹತ್ಯೆಗೈದ್ಯ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಗಂಭೀರ್ ಸಿಂಗ್ ಎಂಬಾತನನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ.
6 ಮಂದಿ ಅಮಾಯಕರನ್ನು ಭೀಕರವಾಗಿ ಹತ್ಯೆಗೈದ ಈ ಪ್ರಕರಣವನ್ನು ನಿರ್ಲಕ್ಷ್ಯದಿಂದ ತನಿಖೆ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್ನ ಪೀಠ ಹೇಳಿದೆ.
ಆಗ್ರಾದಲ್ಲಿರುವ ತಮ್ಮ ಪಿತಾೃರ್ಜಿತ ಆಸ್ತಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಆರೋಪಿ ಗಂಭೀರ್ ಸಿಂಗ್ ಆತನ ಸಹೋದರ ಸತ್ಯಭಾನ್, ಅತ್ತಿಗೆ ಪುಷ್ಪಾ ಹಾಗೂ ಅವರ ನಾಲ್ಕು ಮಕ್ಕಳನ್ನು ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 2012ರಲ್ಲಿ ಗಂಭೀರ್ ಸಿಂಗ್, ಗಾಯತ್ರಿ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿತ್ತು.
2017ರಲ್ಲಿ ವಿಚಾರಣಾ ನ್ಯಾಯಾಲಯ ಗಂಭೀರ್ ಸಿಂಗ್ಗೆ ಮರಣದಂಡನೆ ವಿಧಿಸಿತ್ತು. ಆದರೆ, ಗಾಯತ್ರಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಗಂಭೀರ್ ಸಿಂಗ್ 2019ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದ ತಿರಸ್ಕರಿಸಿತ್ತು. ಅನಂತರ ಗಂಭೀರ್ ಸಿಂಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಜನವರಿ 28ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ‘‘ಹತ್ಯೆಯ ಹಿಂದಿನ ಉದ್ದೇಶದ ಕುರಿತು ಸರಿಯಾದ ಪುರಾವೆ ಸಂಗ್ರಹಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಪ್ರಾಸಿಕ್ಯೂಷನ್ ನ ಪ್ರಕರಣ ಸರಿಪಡಿಸಲಾಗದ ಲೋಪದೋಷಗಳಿಂದ ಕೂಡಿದೆ’’ ಎಂದು ಹೇಳಿದೆ.







