ದಿಲ್ಲಿ | ಮೆಟ್ರೋ ಕಾಮಗಾರಿಗಾಗಿ ಪುನರ್ವಸತಿ ಕೇಂದ್ರ ಬಂದ್: ತಪಾಸಣೆ ನಡೆಸುವಂತೆ ಕಾನೂನು ಸೇವೆ ಆಯೋಗಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ |PC : PTI
ಹೊಸದಿಲ್ಲಿ: ದಿಲ್ಲಿ ಮೆಟ್ರೊ ರೈಲ್ ಕಾರ್ಪೊರೇಷನ್ ಕಾಮಗಾರಿಗಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ನಗರ ಪುನರ್ವಸತಿ ಕೇಂದ್ರಗಳನ್ನು ಸ್ಥಳಾಂತರ ಮಾಡಿರುವ ಕುರಿತು ತಪಾಸಣೆ ಕೈಗೊಂಡು, ವರದಿ ಸಲ್ಲಿಸುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿರುವ ದಿಲ್ಲಿ ಮೆಟ್ರೊ ರೈಲ್ ಕಾರ್ಪೊರೇಷನ್ ಕಾಮಗಾರಿಗಾಗಿ ಆನಂದ್ ವಿಹಾರ್ ಹಾಗೂ ಸರಾಯಿ ಕಾಳೆ ಖಾನ್ ಬಳಿ ಅಸ್ತಿತ್ವದಲ್ಲಿದ್ದ ಎಂಟು ನಿರ್ವಸತಿಗರ ಪುನರ್ವಸತಿ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು 2003ರಲ್ಲಿ ಇ.ಆರ್.ಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಈ ಪುನರ್ವಸತಿ ಕೇಂದ್ರಗಳ ಮುಚ್ಚುಗಡೆಯಿಂದ ನೂರಾರು ಮಂದಿ ವಸತಿಹೀನರಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾ. ಎನ್.ವಿ.ಅಂಜಾರಿಯ ಹಾಗೂ ನ್ಯಾ. ಅಲೋಕ್ ಆರಾಧೆ ಅವರನ್ನೊಳಗೊಂಡ ನ್ಯಾಯಪೀಠದ ಗಮನಕ್ಕೆ ತಂದರು.
ಈ ಹಿಂದೆ ಆರು ಪುನರ್ವಸತಿ ಕೇಂದ್ರಗಳನ್ನು ಮುಚ್ಚಲಾಗಿದ್ದು, ಇದೀಗ ಸರಾಯಿ ಕಾಳೆ ಖಾನ್ ಹಾಗೂ ಆನಂದ್ ವಿಹಾರ್ ನಲ್ಲಿರುವ ಎಂಟು ಪುನರ್ವಸತಿ ಕೇಂದ್ರಗಳನ್ನು ಮುಚ್ಚಲು ಪ್ರಾಧಿಕಾರಗಳು ಉದ್ದೇಶಿಸಿವೆ. ಇದರಿಂದಾಗಿ, ಸುಮಾರು 1,000ಕ್ಕೂ ಹೆಚ್ಚು ಮಂದಿ ನಿರ್ವಸತಿಗರಾಗಲಿದ್ದಾರೆ ಎಂದು ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಸದ್ಯ ಪ್ರಗತಿಯಲ್ಲಿರುವ ದಿಲ್ಲಿ ಮೆಟ್ರೊ ಸಂಬಂಧಿತ ಕಾಮಗಾರಿಗಳಿಗಾಗಿ ಈ ಪುನರ್ವಸತಿ ಕೇಂದ್ರಗಳನ್ನು ಸ್ಥಳಾಂತರಿಸಲು ದಿಲ್ಲಿ ನಗರ ಪುನರ್ವಸತಿ ಸುಧಾರಣಾ ಮಂಡಳಿ ಅನುಮತಿ ನೀಡಿದ್ದು, ಅವುಗಳಿಗಾಗಿ ಪರ್ಯಾಯ ಸ್ಥಳಗಳನ್ನು ಗುರುತಿಸಿದೆ ಎಂಬ ಸಂಗತಿಯನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಈ ವೇಳೆ, “ಪುನವರ್ಸತಿ ಕೇಂದ್ರಗಳಲ್ಲಿ ನೆಲೆಸಿರುವ ಜನರ ಸಂಖ್ಯೆ, ಈ ಜನರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯ ಪರ್ಯಾಯ ಸ್ಥಳಕ್ಕಿದೆಯೆ ಹಾಗೂ ಸ್ಥಳದಲ್ಲಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ, ಈ ಸಂಬಂಧ ವರದಿ ಸಲ್ಲಿಸಲು ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶಕರಿಗೆ ಸೂಚಿಸಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ.
ಈ ಸಂಬಂಧ ಇನ್ನೆರಡು ವಾರಗಳಲ್ಲಿ ವರದಿಯನ್ನು ಸಲ್ಲಿಸಬೇಕು ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಪೀಠ ನಿರ್ದೇಶನವನ್ನೂ ನೀಡಿದೆ.







