ʼಪವರ್ ಟಿವಿʼಯ ಪ್ರಸಾರ ನಿರ್ಬಂಧಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಪರವಾನಗಿ ಇಲ್ಲದ ಕಾರಣ ಪವರ್ ಟಿವಿಯ ಪ್ರಸಾರ ನಿರ್ಬಂಧಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಪವರ್ ಟಿವಿಯ ಬ್ಲ್ಯಾಕ್ಔಟ್ ಕ್ರಿಯೆಯನ್ನು ರಾಜಕೀಯ ಸೇಡು ಎಂದು ಬಣ್ಣಿಸಿದ್ದು, ವಾಹಿನಿಯ ಧ್ವನಿಯನ್ನು ಸಂಪೂರ್ಣವಾಗಿ ಕುಗ್ಗಿಸುವ ಉದ್ದೇಶವಿದು ಎಂದು ಹೇಳಿದೆ.
ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಮತ್ತು ಅವರ ಸಹೋದರ ಸೂರಜ್ ರೇವಣ್ಣ ಅವರ ಲೈಂಗಿಕ ಹಗರಣದ ಕುರಿತು ‘ಪವರ್ ಟಿವಿ’ ಟಿವಿಯು ವಿಸ್ತೃತ ವರದಿ ಪ್ರಸಾರವನ್ನು ಮಾಡಿತ್ತು.
“ ನಮಗೆ ಇದು ರಾಜಕೀಯ ದ್ವೇಷ ಎಂದು ಮನವರಿಕೆಯಾಗುತ್ತದೆ. ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಪವರ್ ಟಿವಿ ಚಾನೆಲ್ನ ಪರವಾನಗಿ 2021 ರಲ್ಲಿ ಅವಧಿ ಮುಗಿದಿದೆ ಎಂದು ಕಂಡು ಬಂದ ನಂತರ ಕರ್ನಾಟಕ ಹೈಕೋರ್ಟ್ ಜುಲೈ 9 ರವರೆಗೆ ಪ್ರಸಾರ ಚಟುವಟಿಕೆಯಿಂದ ನಿರ್ಬಂಧಿಸಿತ್ತು.





