“ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ಧ್ವನಿ ಕ್ಷೀಣ”
ಕಾರ್ಮಿಕರೊಂದಿಗೆ ಮಾತನಾಡಿದ ಕುಟುಂಬದ ಸದಸ್ಯರ ಅಳಲು

Photo: NDTV
ಡೆಹ್ರಾಡೂನ್: ಕಳೆದ ಏಳು ದಿನಗಳಿಂದ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರೊಂದಿಗೆ ಅವರ ಕುಟುಂಬದ ಸದಸ್ಯರು ಮಾತುಕತೆ ನಡೆಸುತ್ತಿದ್ದು, ಅವರ ಧ್ವನಿಯು ದಿನೇದಿನೇ ಕ್ಷೀಣವಾಗುತ್ತಿದೆ ಹಾಗೂ ಅವರ ಚೈತನ್ಯವು ಕುಗ್ಗುತ್ತಿದೆ ಎಂದು ಸಿಲ್ಕ್ಯಾರ ಸುರಂಗದ ಮೇಲೆ ಕಣ್ಣಿಟ್ಟಿರುವ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚಾರ್ ಧಾಮ್ ಮಾರ್ಗದಲ್ಲಿನ ನಿರ್ಮಾಣ ಹಂತದ ಸುರಂಗವು ರವಿವಾರ ಕುಸಿದು ಬಿದ್ದಿತ್ತು. ಈ ಸಂದರ್ಭದಲ್ಲಿ 41 ಕಾರ್ಮಿಕರು ಸುರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗಂಟೆಗಳು ಕಳೆಯುತ್ತಿರುವಂತೆಯೆ, ಸುರಂಗದ ಹೊರಗೆ ಕಾಯುತ್ತಿರುವ ಕಾರ್ಮಿಕರ ಕುಟುಂಬಗಳ ಸದಸ್ಯರ ಹತಾಶೆಯು ವೃದ್ಧಿಸುತ್ತಲೇ ಇದೆ. ಸುರಂಗದ ಕುಸಿದು ಬಿದ್ದಿರುವ ಅವಶೇಷಗಳ ನಡುವೆ ಕೊಳವೆಯನ್ನು ತೂರಿಸಿ, ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಸುರಕ್ಷಿತ ಮಾರ್ಗವನ್ನು ನಿರ್ಮಿಸಲು ರಂಧ್ರ ಕೊರೆಯುತ್ತಿದ್ದ ಅಮೆರಿಕಾ ನಿರ್ಮಾಣದ ಆಗರ್ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಶುಕ್ರವಾರದಿಂದ ರಕ್ಷಣಾ ಕಾರ್ಯಾಚರಣೆಯನ್ನು ಅಮಾನತುಗೊಳಿಸಲಾಗಿದೆ. ಇದರಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವವರು ಹಾಗೂ ಕುಟುಂಬ ಸದಸ್ಯರ ಕ್ಷೋಭೆ ದುಪ್ಪಟ್ಟಾಗಿದೆ.
“ಕತ್ತಲ ಸುರಂಗದಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳ ಆರೋಗ್ಯ ಸ್ಥಿತಿ ಗಂಟೆಗಳು ಕಳೆದಂತೆ ಹದಗೆಡುತ್ತಲೇ ಹೋಗುತ್ತಿದ್ದು, ಅವರನ್ನೇ ನಂಬಿಕೊಂಡಿರುವ ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ” ಎಂದು ಸುರಂಗದಲ್ಲಿ ಸಿಲುಕಿಕೊಂಡಿರುವ ಸುಶೀಲ್ ಎಂಬ ಕಾರ್ಮಿಕನ ಹಿರಿಯ ಸಹೋದರ ಹರಿದ್ವಾರ್ ಶರ್ಮ ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ, ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ರಕ್ಷಣಾ ಮಾರ್ಗ ನಿರ್ಮಿಸಲು ಐದನೆಯ ಕೊಳವೆಯನ್ನು ಸುರಂಗದ ಅವಶೇಷಗಳ ನಡುವೆ ತೂರಿಸುವಾಗ ಶುಕ್ರವಾರ ಮಧ್ಯಾಹ್ನ ಸುಮಾರು 2.45ರ ವೇಳೆಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಹೀಗಾಗಿ ಮತ್ತಷ್ಟು ಭೂಕುಸಿತವಾಗುವ ಅಪಾಯವಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ತಜ್ಞರು ಎಚ್ಚರಿಸಿದ್ದರಿಂದ, ಸುರಂಗದ ಅವಶೇಷಗಳ ನಡುವೆ ಕೊಳವೆಯನ್ನು ತೂರಿಸುವ ಕೆಲಸವನ್ನು ರಕ್ಷಣಾ ತಂಡವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.







