ಸುನೀಲ್ ಚೆಟ್ರಿಗಿಂತ ಉತ್ತಮ ಆಟಗಾರ ಇಂದಿಗೂ ಭಾರತದಲ್ಲಿಲ್ಲ: ಜಮೀಲ್

Photo | PTI and AIFF
ಬೆಂಗಳೂರು: ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಇಂದಿಗೂ ಸುನೀಲ್ ಚೆಟ್ರಿಗಿಂತ ಉತ್ತಮ ಆಟಗಾರನಿಲ್ಲ ಹಾಗೂ ಅವರು ಎಲ್ಲಿಯವರೆಗೂ ಲಭ್ಯವಿರುತ್ತಾರೊ ಅಲ್ಲಿಯವರೆಗೆ ಅವರು ರಾಷ್ಟ್ರೀಯ ತಂಡದಲ್ಲಿರುತ್ತಾರೆ ಎಂದು ಸೋಮವಾರ ಭಾರತೀಯ ಫುಟ್ ಬಾಲ್ ತಂಡದ ನೂತನ ಮುಖ್ಯ ಕೋಚ್ ಖಾಲಿದ್ ಜಮೀಲ್ ಘೋಷಿಸಿದರು.
ಭಾರತೀಯ ಫುಟ್ ಬಾಲ್ ತಂಡದ ಮುಖ್ಯ ಕೋಚ್ ಆಗಿ ಇದೇ ಪ್ರಥಮ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಇಲ್ಲಿ ಮಾತನಾಡಿದ ಖಾಲಿದ್ ಜಮೀಲ್, “ಅವರಿಗಿಂತ ಉತ್ತಮ ಗುಣಮಟ್ಟದ ಆಟಗಾರ ಭಾರತದಲ್ಲಿಲ್ಲ. ಹೀಗಿರುವಾಗ, ಅವರು ಲಭ್ಯವಿದ್ದರೆ, ಅವರೇಕೆ ರಾಷ್ಟ್ರೀಯ ತಂಡದಲ್ಲಿರಬಾರದು? ನಮಗೆ ಅವರ ಅನುಭವ ಬೇಕಿದೆ. ಅವರೊಬ್ಬ ದಂತಕತೆಯಾಗಿದ್ದು, ಹಲವಾರು ವರ್ಷಗಳಿಂದ ಅವರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ” ಎಂದು ಶ್ಲಾಘಿಸಿದರು.
ಕಳೆದ ವರ್ಷದ ಜೂನ್ ತಿಂಗಳಲ್ಲಿ ಕುವೈತ್ ವಿರುದ್ಧ ನಡೆದಿದ್ದ ಪಂದ್ಯದ ನಂತರ, ಸುನೀಲ್ ಚೆಟ್ರಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಏಶ್ಯನ್ ಕಪ್ ನ ಮೂರನೆಯ ಅರ್ಹತಾ ಸುತ್ತಿಗೆ ಭಾರತ ತಂಡ ತಲುಪಲು ನೆರವಾಗುವಂತೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತ ತಂಡದ ಮುಖ್ಯ ಆಗಿದ್ದ ಕೋಚ್ ಮನೊಲೊ ಮಾರ್ಕ್ವೆಝ್ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದ ಅವರು, ಮಾಲ್ಡೀವ್ಸ್ ಎದುರಿನ ಪಂದ್ಯದಲ್ಲಿ ಆಡುವ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಸುನೀಲ್ ಚೆಟ್ರಿ ನಾಲ್ಕು ಪಂದ್ಯಗಳನ್ನಾಡಿದ್ದು, ಮಾಲ್ಡೀವ್ಸ್ ಎದುರು 3-0 ಅಂತರದಲ್ಲಿ ಗೆಲುವು ಸಾಧಿಸಿದ್ದ ಪಂದ್ಯದಲ್ಲಿ ಮಾತ್ರ ಅವರು ಗೋಲು ಗಳಿಸಿದ್ದರು.
ಆದರೆ, ಮುಂಬರುವ ಕಾಫಾ ನೇಷನ್ಸ್ ಕಪ್ ಗಾಗಿ ಬಿಡುಗಡೆಯಾಗಿರುವ ಸಂಭವನೀಯ ಆಟಗಾರರ ಪಟ್ಟಿಯಿಂದ ಸುನೀಲ್ ಚೆಟ್ರಿ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಭಾರತೀಯ ಫುಟ್ ಬಾಲ್ ತಂಡದ ಮುಖ್ಯ ಕೋಚ್ ಖಾಲಿದ್ ಜಮೀಲ್ ರಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ.







