ಕಾಂಗ್ರೆಸ್ ಪಕ್ಷವು ಆಪ್ನೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು: ಅಜಯ್ ಮಾಕನ್

ಅಜಯ್ ಮಾಕನ್ (PTI)
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಪ್ನೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು. ಆದರೆ, ಮೈತ್ರಿಯ ಆಯ್ಕೆ ಈಗಲೂ ಮುಕ್ತವಾಗಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಅಜಯ್ ಮಾಕನ್, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋಟ್ಲಾ ರಸ್ತೆಯಲ್ಲಿನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪ್ರಪ್ರಥಮ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಜಯ್ ಮಾಕನ್, "ಆಪ್ನೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದರು.
2013ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ಗೆ ಕಾಂಗ್ರೆಸ್ ಯಾವುದೇ ನೆರವು ನೀಡಬಾರದಿತ್ತು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಆಪ್ನೊಂದಿಗೆ ಮೈತ್ರಿ ಮಾಡಿಕೊಳ್ಳಬಾರದಿತ್ತು ಎಂಬುದು ನನ್ನ ಭಾವನೆಯಾಗಿದೆ. ಆದರಿದು ನನ್ನ ವೈಯಕ್ತಿಕ ಅನಿಸಿಕೆ ಎಂದು ಅವರು ಹೇಳಿದರು.
ಅರವಿಂದ್ ಕೇಜ್ರಿವಾಲ್ ವಿರುದ್ಧ ನಾನು ನೀಡಿದ್ದ ದೇಶದ್ರೋಹಿ ಹಾಗೂ ಬಿಜೆಪಿಯ ನೆರವಿನಿಂದ ಆಪ್ ದಿಲ್ಲಿಯಲ್ಲಿ ಪ್ರಬಲವಾಗುತ್ತಿದೆ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದೂ ಅವರು ಪುನರುಚ್ಚರಿಸಿದರು.
ಅರವಿಂದ್ ಕೇಜ್ರಿವಾಲ್ರನ್ನು ದೇಶದ್ರೋಹಿ ಎಂದು ಕರೆದ ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಜಯ್ ಮಾಕನ್, ನಾನು ನನ್ನ ವೈಯಕ್ತಿಕ ಅಭಿಪ್ರಾಯ ನೀಡಿದ್ದು, ಅದಕ್ಕೆ ನಾನೀಗಲೂ ಬದ್ಧವಾಗಿದ್ದೇನೆ. 2013ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಕಾಂಗ್ರೆಸ್ ನೆರವು ನೀಡಿದ್ದರಿಂದ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಆಪ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ದಿಲ್ಲಿ ಜನತೆ ಸಂಕಷ್ಟ ಅನುಭವಿಸಿದರು ಎಂದು ಹೇಳಿದರು.
"ದಿಲ್ಲಿ ಜನತೆ ಸಂಕಷ್ಟ ಅನುಭವಿಸಿದ್ದರಿಂದ ಬಿಜೆಪಿ ಲಾಭ ಪಡೆಯಿತು. ಆದರಿದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಈಗಲೂ ಆಪ್ನೊಂದಿಗೆ ಹೋಗಲಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಜಯ್ ಮಾಕನ್, "ಬಿಜೆಪಿಯ ನೆರವಿನಿಂದ ಅರವಿಂದ್ ಕೇಜ್ರಿವಾಲ್ ದಿಲ್ಲಿಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. ಬಿಜೆಪಿ ವಿರುದ್ಧ ಹೋರಾಡಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರಬೇಕಾದುದು ಮುಖ್ಯವಾಗಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷ ಬಲಿಷ್ಠವಾಗಿಲ್ಲದಿದ್ದರೆ, ಬಿಜೆಪಿಯ ವಿರುದ್ಧ ಹೋರಾಡುವುದು ಕಷ್ಟ" ಎಂದು ಹೇಳಿದರು.
"ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವ ಮೂಲಕ ಯಾರೂ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಿಲ್ಲ" ಎಂದೂ ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.







