ಮುಸ್ಲಿಮರು, ಕಾಶ್ಮೀರಿಗಳ ಮೇಲೆ ದಾಳಿ ಮಾಡುವವರ ಮನಸ್ಥಿತಿಯು ಭಯೋತ್ಪಾದಕರಂತೆಯೇ ಇದೆ: ಎಸ್ಪಿ ಸಂಸದ ಅಫ್ಝಲ್ ಅನ್ಸಾರಿ

ಸಂಸದ ಅಫ್ಝಲ್ ಅನ್ಸಾರಿ | Photo: x@LiveLawIndia
ಲಕ್ನೋ: ಇಲ್ಲಿನ ಮುಸ್ಲಿಮರು, ಕಾಶ್ಮೀರಿಗಳ ಮೇಲೆ ದಾಳಿ ಮಾಡುವವರ ಮನಸ್ಥಿತಿಯು ಅಮಾಯಕ ನಾಗರಿಕರನ್ನು ಕೊಲ್ಲಲು ಪಾಕಿಸ್ತಾನದಿಂದ ಬರುವ ಭಯೋತ್ಪಾದಕರ ಮನಸ್ಥಿಯಿಯಂತೇಯೇ ಇದೆ. ಅಂಥವರನ್ನು ಜನರು ಗುರುತಿಸಲು ಪ್ರಾರಂಭಿಸಿದ್ದಾರೆ, ಎಂದು ಉತ್ತರ ಪ್ರದೇಶದ ಬಲ್ಲಿಯಾದ ಸಮಾಜವಾದಿ ಪಕ್ಷದ ಸಂಸದ ಅಫ್ಝಲ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಸಮಾರಂಭವೊಂದರಲ್ಲಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ದಾಳಿಯು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಭದ್ರತಾ ವೈಫಲ್ಯದ ಪರಿಣಾಮವಾಗಿದೆ. ಕೇಂದ್ರ ಸರ್ಕಾರವು ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ರೀತಿಯ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ವಿರುದ್ಧ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
"ಪಹಲ್ಗಾಮ್ ಘಟನೆಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ದಾಳಿಯ ಸ್ಥಳವು ಪಾಕಿಸ್ತಾನ ಗಡಿಯಿಂದ 150 ಕಿ.ಮೀ. ದೂರದಲ್ಲಿದೆ. ಭಯೋತ್ಪಾದಕರು ಭಾರತದ ಅಷ್ಟು ದೂರದ ಪ್ರದೇಶವನ್ನು ತಲುಪಲು ಹೇಗೆ ಧೈರ್ಯ ಮಾಡಿದರು? ಈ ಘಟನೆಗೆ ಭಾರತವು ಸೂಕ್ತ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ತನ್ನದಾಗಿಸಿಕೊಳ್ಳಬೇಕು", ಎಂದು ಸಂಸದ ಅನ್ಸಾರಿ ಆಗ್ರಹಿಸಿದರು.







