ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವವರೂ ರಾಜೀನಾಮೆ ನೀಡಬೇಕು : ಅಮಿತ್ ಶಾಗೆ ಕೇಜ್ರಿವಾಲ್ ತಿರುಗೇಟು

Photo | AP and PTI
ಹೊಸದಿಲ್ಲಿ,ಆ.25: ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಚಿವರು ಒಂದು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲಿದ್ದರೆ ಅವರನ್ನು ವಜಾಗೊಳಿಸುವ ಪ್ರಸ್ತಾವಿತ ಕಾನೂನನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ತಿರುಗೇಟು ನೀಡಿರುವ ಆಪ್ ವರಿಷ್ಠ ಹಾಗೂ ಮಾಜಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ಇತರರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವವರೂ ತಮ್ಮ ಬಲಿಪಶುಗಳು ನಂತರ ಖುಲಾಸೆಗೊಂಡಾಗ ಇದೇ ಕ್ರಮವನ್ನು ಎದುರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಪ್ರತಿಪಕ್ಷಗಳ ಪಕ್ಷಾಂತರಿಗಳನ್ನು ಸೇರಿಸಿಕೊಳ್ಳುತ್ತಿರುವುದಕ್ಕಾಗಿ ಬಿಜೆಪಿಯನ್ನು ಟೀಕಿಸಿರುವ ಕೇಜ್ರಿವಾಲ್,‘ಗಂಭೀರ ಅಪರಾಧಗಳ ಆರೋಪ ಹೊತ್ತಿರುವ ನಾಯಕರನ್ನು ಸ್ವೀಕರಿಸಿ ಅವರ ವಿರುದ್ಧದ ಪ್ರಕರಣಗಳನ್ನು ತೆರವುಗೊಳಿಸಿ ಅವರಿಗೆ ಸಚಿವ,ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಹುದ್ದೆಗಳನ್ನು ಕರುಣಿಸುವಂತಹ ವ್ಯಕ್ತಿ,ಅಂತಹ ಪ್ರಧಾನಿ ಅಥವಾ ಸಚಿವರು ರಾಜೀನಾಮೆ ನೀಡಬೇಕೇ ?’ಎಂದು ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ.
ಯಾರನ್ನಾದರೂ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ತಳ್ಳಿದ ಬಳಿಕ ಆ ವ್ಯಕ್ತಿ ನಿರಪರಾಧಿ ಎಂದು ಸಾಬೀತಾದರೆ ಸುಳ್ಳು ಪ್ರಕರಣವನ್ನು ಹೆಣೆದ ಸಚಿವರಿಗೆ ಎಷ್ಟು ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದೂ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಶಾ,ಪ್ರಧಾನಿ,ಮುಖ್ಯಮಂತ್ರಿ ಅಥವಾ ಸಚಿವ ಗಂಭೀರ ಪ್ರಕರಣದಲ್ಲಿ ಜೈಲು ಸೇರಿದಾಗ ಅವರು ಹುದ್ದೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕೇ ಎಂದು ಪ್ರಶ್ನಿಸಿದ್ದರು.
ಜಂಟಿ ಸಂಸದಿಯ ಸಮಿತಿಗೆ ಸಲ್ಲಿಸಲಾಗಿರುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡ ಶಾ,ಈ ಕರಡು ಕಾನೂನು ಸಣ್ಣಪುಟ್ಟ ಅಪರಾಧಗಳ ಆರೋಪ ಎದುರಿಸುತ್ತಿರುವ ಸಚಿವರಿಗೆ ಅನ್ವಯವಾಗುವುದಿಲ್ಲ. ಆದರೆ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವವರು ಅಥವಾ ಐದು ವರ್ಷಗಳಿಗೂ ಹೆಚ್ಚಿನ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳ ಆರೋಪಿಗಳು ಜೈಲಿನಿಂದಲೇ ಸರಕಾರವನ್ನು ನಡೆಸುವುದು ಸರಿಯೇ ಎಂದು ಪ್ರಶ್ನಿಸಿದ್ದರು.
ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿದ್ದಾಗ ಅಲ್ಲಿಂದಲೇ ದಿಲ್ಲಿ ಸರಕಾರವನ್ನು ನಡೆಸಿದ್ದರು.







