ದಿಲ್ಲಿ: ಹಳೆಯ ಪಿಂಚಣಿ ಯೋಜನೆಯ ಮರು ಜಾರಿಗೆ ಆಗ್ರಹಿಸಿ ಬೃಹತ್ ಧರಣಿ

Photo: X/@RakeshTikaitBKU
ಹೊಸದಿಲ್ಲಿ: ರವಿವಾರ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ವಿರೋಧಿಸಿ ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಸಂಪೂರ್ಣವಾಗಿ ಮರು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಸಾವಿರಾರು ಸರ್ಕಾರಿ ನೌಕರರು ನೆರೆದಿದ್ದರು. ಪ್ರತಿಭಟನಾಕಾರರ ಪೈಕಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಲ್ಲದೆ, 20 ರಾಜ್ಯಗಳ ಸಾರ್ವಜನಿಕ ವಲಯ ಉದ್ಯಮದ ನೌಕರರು ಸೇರಿದ್ದರು. ಹಳೆಯ ಪಿಂಚಣಿ ಯೋಜನೆಯ ಮರು ಜಾರಿಗೆ ತನ್ನ ಅಭಿಯಾನವನ್ನು ತೀವ್ರಗೊಳಿಸುತ್ತಿರುವ ನ್ಯಾಶನಲ್ ಮೂವ್ ಮೆಂಟ್ ಫಾರ್ ಓಲ್ಡ್ ಪೆನ್ಷನ್ ಸ್ಕೀಮ್ (ಎನ್ಎಂಒಪಿಎಸ್) ನೇತೃತ್ವದಲ್ಲಿ ‘ಪಿಂಚಣಿ ಶಂಖನಾದ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿತ್ತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಎನ್ಎಂಒಪಿಎಸ್ ನಾಯಕ ವಿಜಯ್ ಕುಮಾರ್ ಬಂಧು, “ನಾವು ದೇಶದ ಪ್ರತಿ ಮೂಲೆಯಲ್ಲೂ ಹಳೆಯ ಪಿಂಚಣಿ ಯೋಜನೆಯ ಮರು ಜಾರಿಯ ಸಂದೇಶವನ್ನು ಹರಡುತ್ತಿದ್ದೇವೆ. ನಮ್ಮ ಪ್ರಯತ್ನ ಹಾಗೂ ಹೋರಾಟದ ಕಾರಣಕ್ಕೆ ನಾಲ್ಕು ಅಥವಾ ಐದು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಯಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಿದರೆ, ರಾಜ್ಯ ಸರ್ಕಾರಗಳ ಮೇಲೆ ಹೊರೆ ಬೀಳುವುದಿಲ್ಲ ಎಂಬುದು ನಮ್ಮ ನಂಬಿಕೆಯಾಗಿದೆ” ಎಂದು ಹೇಳಿದ್ದಾರೆ.
“ಜನವರಿ 1, 2004ರ ನಂತರ ಸರ್ಕಾರಿ ಸೇವೆಗೆ ಸೇರಿರುವ ನೌಕರರು ಹೊಸ ಪಿಂಚಣಿ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಹಳೆಯ ಪಿಂಚಣಿ ಯೋಜನೆಯಿಂದ ವಂಚಿಸಿ, ರಾಷ್ಟ್ರೀಯ ಪಿಂಚಣಿ ಯೋಜನೆಗೆ ತಮ್ಮನ್ನು ಬಲವಂತವಾಗಿ ನೂಕಿರುವುದರಿಂದ ನೌಕರರು ತಮ್ಮ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದಾರೆ” ಎಂದು ಅಖಿಲ ಭಾರತ ರೈಲ್ವೆ ಪುರುಷರ ಮಹಾಮಂಡಳದ ರಾಷ್ಟ್ರೀಯ ಸಂಚಾಲಕ ಹಾಗೂ ಪ್ರಧಾನ ಕಾರ್ಯದರ್ಶಿ ಶಿವ್ ಗೋಪಾಲ್ ಮಿಶ್ರಾ Manorama News ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದಾಗಿನಿಂದ ಸರ್ಕಾರಿ ನೌಕರರು ಈ ಯೋಜನೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಪಾವತಿ ಆಯೋಗದ ಸೂಚ್ಯಂಕಗಳನ್ನು ಆಧರಿಸಿ ನೌಕರನಿಂದ ಯಾವುದೇ ಕೊಡುಗೆಯನ್ನು ಪಡೆಯದೆ ಪಿಂಚಣಿಯನ್ನು ಪಾವತಿಸುವುದರಿಂದ ಹಳೆಯ ಪಿಂಚಣಿ ಯೋಜನೆಯು ಹಣದುಬ್ಬರದಲ್ಲಿ ಅಂತ್ಯವಾಗುತ್ತಿದೆ. ಹೀಗಾಗಿ, ರಾಷ್ಟ್ರೀಯ ಪಿಂಚಣಿ ಯೋಜನೆಯು ನೌಕರರು ಹಾಗೂ ಉದ್ಯೋಗದಾತರಿಬ್ಬರ ಕೊಡುಗೆಯನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ ಹಾಗೂ ಪಿಂಚಣಿ ಮೊತ್ತವು ನಿವೃತ್ತಿಯ ಸಂದರ್ಭದಲ್ಲಿನ ವೇತನವನ್ನು ಆಧರಿಸಿದ ನಿಗದಿತ ಮೊತ್ತವಾಗಿರದೆ, ಮಾರುಕಟ್ಟೆಯನ್ನು ಆಧರಿಸಿರುತ್ತದೆ.







