ನಕ್ಸಲೀಯರಿಂದ ಬೆದರಿಕೆ | ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಲಿರುವ ಸಾಂಪ್ರದಾಯಿಕ ವೈದ್ಯ ಹೇಮಚಂದ್ ಮಾಂಝಿ

ಹೇಮಚಂದ್ ಮಾಂಝಿ | ANI
ಹೊಸದಿಲ್ಲಿ : ನಕ್ಸಲೀಯರಿಂದ ಬೆದರಿಕೆ ಎದುರಿಸಿರುವುದರಿಂದ ತಾನು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲಿದ್ದೇನೆ ಎಂದು ವೈದ್ಯಕೀಯ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸಾಂಪ್ರದಾಯಿಕ ವೈದ್ಯ ಹೇಮಚಂದ್ ಮಾಂಝಿ ಹೇಳಿದ್ದಾರೆ.
ಚತ್ತೀಸ್ಗಢದ ನಾರಾಯಣಪುರ ಜಿಲ್ಲೆಯ ಕುಗ್ರಾಮವೊಂದರಲ್ಲಿ ವೈದ್ಯರಾಜ ಎಂದು ಜನಪ್ರಿಯರಾಗಿರುವ ಮಾಂಝಿ ಅವರು, ತಾನು ವೈದ್ಯಕೀಯ ಸೇವೆಯನ್ನು ನಿಲ್ಲಿಸುವುದಾಗಿ ಕೂಡ ಹೇಳಿದ್ದಾರೆ.
72 ವರ್ಷದ ಮಾಂಝಿ ಅವರು ಕಳೆದ ತಿಂಗಳು ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ನಕ್ಸಲೀಯರು ಮೇ 26ರಂದು ಜಿಲ್ಲೆಯ ಛೋಟೆಡೊಂಗಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಮೇಲಿ ಹಾಗೂ ಗೌರ್ದಾಂಡ್ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿರುವ ಎರಡು ಮೊಬೈಲ್ ಗೋಪುರಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೆ, ಮಾಂಝಿ ಅವರಿಗೆ ಬೆದರಿಕೆ ಒಡ್ಡುವ ಬ್ಯಾನರ್ ಹಾಗೂ ಕರಪತ್ರಗಳನ್ನು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಂಝಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಚಿತ್ರವನ್ನು ಕೂಡ ಈ ಕರಪತ್ರ ಒಳಗೊಂಡಿತ್ತು.
ನಾರಾಯಣಪುರದ ಛೋಟೆಡೊಂಗಾರ್ ಪ್ರದೇಶದಲ್ಲಿ ಅಮ್ದಾಯಿ ಘಾಟಿ ಕಬ್ಬಿಣದ ಅದಿರು ಯೋಜನೆ ಆರಂಭಿಸಲು ಮಾಂಝಿ ನೆರವು ನೀಡಿದ್ದಾರೆ ಹಾಗೂ ಅದಕ್ಕಾಗಿ ದೊಡ್ಡ ಮೊತ್ತ ಲಂಚ ಸ್ವೀಕರಿಸಿದ್ದಾರೆ ಎಂದು ನಕ್ಸಲೀಯರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಮಾಂಝಿ ಅವರು ನಿರಾಕರಿಸಿದ್ದಾರೆ.







