"ಮುಸ್ಲಿಂ ಸಮುದಾಯದ ಅಸ್ತಿತ್ವಕ್ಕೆ ಅಪಾಯ": ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಕೇರಳದ ಹಿಂದೂ ಸಂಸ್ಥೆ

ಸಾಂದರ್ಭಿಕ ಚಿತ್ರ (Photo: PTI)
ತಿರುವನಂತಪುರಂ: ಕೇರಳ ಮೂಲದ ಹಿಂದೂ ಸಂಸ್ಥೆಯಾದ ಶ್ರೀ ನಾರಾಯಣ ಮಾನವ ಧರ್ಮಂ ಟ್ರಸ್ಟ್ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಭಾರತದಲ್ಲಿ ಮುಸ್ಲಿಂ ಸಮುದಾಯದ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಅದು ಅರ್ಜಿಯಲ್ಲಿ ವಾದಿಸಿದೆ.
ʼಎಲ್ಲಾ ವ್ಯಕ್ತಿಗಳು ಮತ್ತು ಸಮುದಾಯಗಳ ಯೋಗಕ್ಷೇಮದ ಬಗ್ಗೆ ಶ್ರೀ ನಾರಾಯಣ ಗುರುಗಳ ಬೋಧನೆಯನ್ನು ಗಮನಿಸಿದರೆ, ಶ್ರೀ ನಾರಾಯಣ ಮಾನವ ಧರ್ಮಂ ಟ್ರಸ್ಟ್ ಭಾರತದ ಮುಸ್ಲಿಂ ಸಮುದಾಯದ ಮೇಲೆ ಮತ್ತು ನಮ್ಮ ದೇಶದ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ ಬೀರುವ ಪ್ರಶ್ನಾರ್ಹ ಕಾಯ್ದೆಯ ವಿನಾಶಕಾರಿ ಪರಿಣಾಮವನ್ನು ನೋಡುತ್ತಾ ಸುಮ್ಮನಿರಲು ಸಾಧ್ಯವಿಲ್ಲʼ ಎಂದು ನಾರಾಯಣ ಮಾನವ ಧರ್ಮಂ ಟ್ರಸ್ಟ್ ಹೇಳಿದೆ.
ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ ಮೇ.15ಕ್ಕೆ ಮುಂದೂಡಿದೆ.
ವಕ್ಫ್ ತಿದ್ದುಪಡಿ ಕಾಯ್ದೆ- 2025ರ ಸಾಂವಿಧಾನಿಕತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಸಿಜೆಐ ಖನ್ನಾ ಅವರು ಮೇ 13ರಂದು ತಮ್ಮ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಮಧ್ಯಂತರ ಆದೇಶವನ್ನು ಹೊರಡಿಸಲು ಈ ವಿಷಯದಲ್ಲಿ ದೀರ್ಘ ವಿಚಾರಣೆಯ ಅಗತ್ಯವಿರುವುದರಿಂದ ವಿಚಾರಣೆಯನ್ನು ಬಿ.ಆರ್. ಗವಾಯಿ ನೇತೃತ್ವದ ಪೀಠಕ್ಕೆ ವರ್ಗಾಯಿಸಿದೆ. ನೂತನ ಸಿಜೆಐ ನೇತೃತ್ವದ ಪೀಠ ಈ ಕುರಿತು ಮೇ.15ರಂದು ವಿಚಾರಣೆ ನಡೆಸಲಿದೆ.







