ಮಧ್ಯಪ್ರದೇಶ | ಕಲ್ಲಿದ್ದಲು ಗಣಿಯ ಮೇಲ್ಚಾವಣಿ ಕುಸಿತ: ಇಬ್ಬರ ರಕ್ಷಣೆ, ಗಣಿಯೊಳಗೆ ಸಿಲುಕಿರುವ ಮತ್ತೋರ್ವ ವ್ಯಕ್ತಿ

PC : PTI
ಬೇತುಲ್: ಗುರುವಾರ ಮಧ್ಯಾಹ್ನ ಮಧ್ಯಪ್ರದೇಶದ ಬೇತೂರ್ ಜಿಲ್ಲೆಯ ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಮೇಲ್ಚಾವಣಿ ಕುಸಿತದಿಂದ ಗಣಿಯೊಳಗೆ ಸಿಲುಕಿದ್ದ ಇಬ್ಬರನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, ಮತ್ತೋರ್ವ ವ್ಯಕ್ತಿ ಇನ್ನೂ ಗಣಿಯೊಳಗೆ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇತೂರ್ ಜಿಲ್ಲೆಯ ಛತ್ತರ್ ಪ್ರದೇಶದಲ್ಲಿರುವ ಕೇಂದ್ರ ಸರಕಾರದ ಉದ್ಯಮವಾದ ಕೋಲ್ ಇಂಡಿಯಾ ಲಿಮಿಟೆಡ್ ನ ಅಂಗ ಸಂಸ್ಥೆಯಾದ ವೆಸ್ಟರ್ನ್ ಕೋಲ್ ಫೀಲ್ಡ್ಸ್ ನ ಭೂಗತ ಗಣಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಮೇಲ್ಚಾವಣಿ ಕುಸಿದ ನಂತರ, ಓರ್ವ ಮೇಲ್ವಿಚಾರಕ ಸೇರಿದಂತೆ ಮೂರು ಮಂದಿ ಅವಶೇಷಗಳಡಿ ಮುಚ್ಚಿ ಹೋಗಿದ್ದರು. ಈ ಪೈಕಿ ಇಬ್ಬರನ್ನು ಹೊರಗೆಳೆಯಲಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಶ್ಚಲ್ ಝಾರಿಯಾ ತಿಳಿಸಿದ್ದಾರೆ.
“ನಾವು ಅವಶೇಷಗಳಡಿ ಸಿಲುಕಿರುವ ಮತ್ತೊಬ್ಬ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ” ಎಂದೂ ಅವರು ಹೇಳಿದ್ದಾರೆ.
ಸ್ಥಳೀಯರ ಪ್ರಕಾರ, ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಮೇಲ್ಚಾವಣಿ ಕುಸಿಯಿತು ಎನ್ನಲಾಗಿದೆ.







